ಬೆಂಗಳೂರು: ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಸಹಕಾರ ಇಲಾಖೆಯ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ನಾಳೆ ಸಹಕಾರ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದಾರೆ.
ವಿಕಾಸಸೌಧದಲ್ಲಿ ಸಂಜೆ 4.30ಕ್ಕೆ ನಡೆಯಲಿರುವ ಸಭೆಯಲ್ಲಿ ಸಹಕಾರ ಇಲಾಖೆಯ ರಿಜಿಸ್ಟ್ರಾರ್, ಡಿಸಿಸಿ ಬ್ಯಾಂಕ್ ಎಂಡಿ ಹಾಗೂ ಎಲ್ಲಾ ಮ್ಯಾನೇಜರ್ ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಅಡಿಯೋದಲ್ಲಿ ಪ್ರಸ್ತಾಪವಾಗಿರುವ ವಿಷಯಗಳ ಕುರಿತು ಚರ್ಚೆ ಮಾಡಲಿರುವ ಸಚಿವರು, ಇದೇ ವೇಳೆ ಸಚಿವ ಮಾಧುಸ್ವಾಮಿ ಅವರು ಆಡಿಯೋದಲ್ಲಿ ಪ್ರಸ್ತಾಪಿಸಿರುವ ವಿಚಾರದ ಬಗ್ಗೆ ವರದಿ ನೀಡುವಂತೆ ತುಮಕೂರು ಡಿಸಿಸಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದಾರೆ.
ಇದನ್ನೂ ಓದಿ: ಆ ಆಡಿಯೋ ನನ್ನದೇ, ಗೊತ್ತಿಲ್ಲದೇ ಕಾಲ್ ರೆಕಾರ್ಡ್ ಮಾಡೋದು ಅಪರಾಧ: ಸಚಿವ ಮಾಧುಸ್ವಾಮಿ
ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಬಹಿರಂಗ ಹೇಳಿಕೆ ನೀಡಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ನಾಯಕರಿಂದ ಸೂಚನೆ ಬಂದಿರುವ ಕಾರಣಕ್ಕೆ ಸೋಮಶೇಖರ್ ಈ ಸಭೆ ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ.