ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕೆಲವು ಎನ್ಜಿಒಗಳಿಂದ ಬಂದ ನೆರವಿನ ಮೂಲಕ ಬೆಂಗಳೂರಿನ ಅಂಗನವಾಡಿ ಕಾರ್ಯಕರ್ತರಿಗೆ ಸುಮಾರು ಹತ್ತು ಸಾವಿರ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಣೆ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸಾಂಕೇತಿಕವಾಗಿ ಕೆಲ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಿ ಮಾತನಾಡಿದ ಅವರು, ಕಳೆದ ಏಳೆಂಟು ತಿಂಗಳಿನಿಂದ ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿ ಎದುರಿಸುತ್ತಿದ್ದೇವೆ.
ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರೂ ಸಹ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಂದು ಅಜೀಂ ಪ್ರೇಮ್ ಜಿ ಫೌಂಡೇಶನ್ ಹಾಗೂ ಯುನೈಟೆಡ್ ಬೆಂಗಳೂರು ಸಂಸ್ಥೆಗಳ ವತಿಯಿಂದ ನೀಡಲಾಗಿರುವ ಸ್ಯಾನಿಟೈಸರ್, ಮಾಸ್ಕ್ ಅನ್ನು ಸಾಂಕೇತಿಕವಾಗಿ ವಿತರಣೆ ಮಾಡಿದ್ದೇನೆ ಎಂದು ಹೇಳಿದರು.
ಇನ್ನು ದೃಷ್ಟಿ ವಿಕಲಚೇತನರಿಗೆ ಟಾಕಿಂಗ್ ಲ್ಯಾಪ್ ಟಾಪ್ ಅನ್ನು ಕೂಡ ಇಂದು ಸಾಂಕೇತಿಕವಾಗಿ ಇಬ್ಬರಿಗೆ ವಿತರಣೆ ಮಾಡಿದ್ದೇನೆ. ಒಟ್ಟು 450 ಲ್ಯಾಪ್‌ಟಾಪ್‌ಗಳನ್ನು ನೀಡಲಾಗುತ್ತಿದೆ. ಅದೇ ರೀತಿ ವಿಕಲಚೇತನರಿಗೆ ರಾಜ್ಯಾದ್ಯಂತ 1,600 ದ್ವಿಚಕ್ರವಾಹನಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೇ ಪ್ರಧಾನಮಂತ್ರಿ ಅವರ ಕನಸಿನ ಕೂಸಾದ ಪೋಷಣ್ ಅಭಿಯಾನ್‌ನಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ ಎಂದರು.