ಬೆಂಗಳೂರು: ಗುರು ರಾಘವೇಂದ್ರ ಬ್ಯಾಂಕ್, ಗುರುಸಾರ್ವಭೌಮ ಸಹಕಾರಿ ಬ್ಯಾಂಕ್, ವಶಿಷ್ಟ ಕ್ರೆಡಿಟ್ ಸಹಕಾರ ಬ್ಯಾಂಕ್ ಅಕ್ರಮ ಪ್ರಕರಣವನ್ನು ಸಿಬಿಐಗೆ ವಹಿಸಲು ಸಹಕಾರ ಸಂಘಗಳ ನಿಬಂಧಕರು ಶಿಫಾರಸು ಮಾಡಿದ್ದು, ಆದಷ್ಟು ಬೇಗ ಪ್ರಕರಣ ಸಿಬಿಐಗೆ ವಹಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಯು ಬಿ ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವ ಸೋಮಶೇಖರ್, ಗುರು ರಾಘವೇಂದ್ರ ಬ್ಯಾಂಕ್, ಗುರುಸಾರ್ವಭೌಮ ಸಹಕಾರಿ ಬ್ಯಾಂಕ್, ವಶಿಷ್ಟ ಕ್ರೆಡಿಟ್ ಸಹಕಾರ ಬ್ಯಾಂಕ್ ಅಕ್ರಮ ಪ್ರಕರಣವನ್ನು ಸಿಬಿಐಗೆ ವಹಿಸಲು ಸಹಕಾರ ಸಂಘಗಳ ನಿಬಂಧಕರು ಶಿಫಾರಸು ಮಾಡಿದ್ದಾರೆ. ಈ ಮೂರು ಬ್ಯಾಂಕ್ ನಲ್ಲಿ ದೊಡ್ಡ ಅಕ್ರಮ ಆಗಿದೆ. ಶಿಫಾರಸನ್ನು ಈಗ ಗೃಹ ಇಲಾಖೆಗೆ ಮತ್ತು ಸಿಎಂಗೆ ಕಳಿಸುತ್ತೇವೆ. 2-3 ದಿನಗಳಲ್ಲಿ ಸಿಎಂಗೆ ಶಿಫಾರಸು ಕಳಿಸುತ್ತೇವೆ. ಸಿಎಂ ಜೊತೆ ಚರ್ಚೆ ಮಾಡಿ ಸಿಬಿಐ ತನಿಖೆಗೆ ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಸಿಬಿಐಗೆ ಕೊಡುವ ವ್ಯವಸ್ಥೆ ಆಗುತ್ತಿದೆ. ಆದಷ್ಟು ಬೇಗ ನಿರ್ಧಾರ ಮಾಡುತ್ತೇವೆ ಎಂದರು.
ಡಿಸಿಸಿ ಬ್ಯಾಂಕ್ ಅಕ್ರಮ ಸಿಬಿಐ ತನಿಖೆ ಇಲ್ಲ: ಡಿಸಿಸಿ ಬ್ಯಾಂಕ್ ಅಕ್ರಮ ಪ್ರಕರಣ ತನಿಖೆಯನ್ನು ಸಿಬಿಐಗೆ ನೀಡಲು ಸಹಕಾರ ಸಚಿವ ಎಸ್. ಟಿ ಸೋಮಶೇಖರ್ ನಿರಾಕರಿಸಿದ್ದು, ಅಕ್ರಮ ಮಾಡಿರುವ ಬ್ಯಾಂಕ್ಗಳ ತನಿಖೆ ಆಗುತ್ತಿದೆ. ಕ್ರಮ ಆಗುತ್ತದೆ ಎಂದು ಹೇಳಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಟಿ. ಎ ಶರವಣ ಮಾತನಾಡಿ, ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ನಡೆದ ಅಕ್ರಮಗಳ ತನಿಖೆಯನ್ನ ಸಿಬಿಐಗೆ ಕೊಡಿ. ಅಮಿತ್ ಶಾ ಕೈ ಕೆಳಗೆ ಇಲಾಖೆ ಬರುತ್ತದೆ. ಸಿಐಡಿ ತನಿಖೆ ಇದಕ್ಕೆ ಸಾಲದು. ಯಾರನ್ನಾದರೂ ಬಲಿ ಕೊಟ್ಟರೆ ಮಾತ್ರ ಅಕ್ರಮ ತಡೆಯಬಹುದು. ರೈತರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿ ಅಕ್ರಮ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಸೋಮಶೇಖರ್, 5 ಡಿಸಿಸಿ ಬ್ಯಾಂಕ್ ನಲ್ಲಿ ಅಕ್ರಮ ಆಗಿದೆ. ಈಗಾಗಲೇ ತನಿಖೆ ನಡೆಯುತ್ತಿದೆ. ಅಕ್ರಮ ಮಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನ ವಜಾ ಮಾಡಲಾಗಿದೆ. ಅಕ್ರಮ ಮಾಡಿರುವ ಡಿಸಿಸಿ ಬ್ಯಾಂಕ್ ನಿಂದ ರಿಕವರಿ ಮಾಡುವ ಕೆಲಸ ಆಗುತ್ತಿದೆ. 5 ಬ್ಯಾಂಕ್ ಬಿಟ್ಟು ಉಳಿದ 21 ಡಿಸಿಸಿ ಬ್ಯಾಂಕ್ಗಳು ನಿಯಮದ ಪ್ರಕಾರ ನಡೆಯುತ್ತಿವೆ. ಅಕ್ರಮ ಮಾಡಿರುವ ಬ್ಯಾಂಕ್ ಗಳ ತನಿಖೆ ಆಗುತ್ತಿದೆ. ಕ್ರಮ ಆಗುತ್ತದೆ ಎಂದರು.
ಗಣಿ ಗುತ್ತಿಗೆ ಬಗ್ಗೆ ತೀರ್ಮಾನ: ಮರಳು ಮತ್ತು ಜಲ್ಲಿ ಪೂರೈಕೆಗಾಗಿ ಗಣಿ ಗುತ್ತಿಗೆ ನೀಡುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಿ ವರದಿ ಪಡೆಯಲಾಗಿದೆ. ಮುಂದಿನ ಸಚಿವ ಸಂಪುಟದಲ್ಲಿ ವರದಿ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ರವಿ ಮಾತನಾಡಿ, ರಾಜ್ಯದಲ್ಲಿ ಕಟ್ಟಡ ಮತ್ತು ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ಸಾಮಗ್ರಿಗಳ ಕೊರತೆ ಇದೆ. ಕಲ್ಲು ಸಾಮಗ್ರಿ ಪೂರೈಕೆ ಆಗುತ್ತಿಲ್ಲ. ಲೀಸ್ ಕೂಡಾ ಸರ್ಕಾರ ಕೊಟ್ಟಿಲ್ಲ. ಇದರಿಂದ ಬೇರೆ ರಾಜ್ಯದಿಂದ ಅಕ್ರಮ ಕಲ್ಲು ಗಣಿಗಾರಿಕೆ ಆಗುತ್ತಿದೆ. 2016 ಮುಂಚೆ ಎಷ್ಟು ಅರ್ಜಿ ಗಣಿಗಾರಿಕೆ ಮಾಡಲು ಬಂದಿದೆ. ಗಣಿ ನಿಯಮಕ್ಕೆ ಅಗತ್ಯ ಉದ್ಯಮ ಸ್ನೇಹಿ ನಿಯಮ ಜಾರಿ ಮಾಡಿ ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ 250 ಲಕ್ಷ ಟನ್ ಎಂಸ್ಯಾಂಡ್ ಮತ್ತು ಜಲ್ಲಿ ಬೇಡಿಕೆ ಇದೆ. ಬೇರೆ ರಾಜ್ಯದಿಂದ 25% ಕಲ್ಲು, ಜಲ್ಲಿ ಒಳಗೆ ಬರುತ್ತಿದೆ. ಇದು ಸರ್ಕಾರದ ಗಮನದಲ್ಲಿ ಇದೆ. ಗಣಿ ಇಲಾಖೆ ಅನುಮತಿ ಕೊಟ್ಟ ಮೇಲೆ ಪರಿಸರ ಇಲಾಖೆ ಹಲವು ನಿಯಮ ಹಾಕುತ್ತದೆ. ಇದು ಸ್ವಲ್ಪ ತಡವಾಗಿದೆ. ಗಣಿ ಗುತ್ತಿಗೆ ನೀಡುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಿ ವರದಿ ಪಡೆಯಲಾಗಿದೆ. ಮುಂದಿನ ಸಚಿವ ಸಂಪುಟದಲ್ಲಿ ವರದಿ ಬಗ್ಗೆ ನಿರ್ಧಾರ ಮಾಡುತ್ತೇವೆ. ಉದ್ಯಮ ಮಾಡುವವರ ಪರವಾಗಿ ಸರ್ಕಾರ ಇದೆ. ಜಲ್ಲಿ, ಎಂ ಸ್ಯಾಂಡ್ ಜನರಿಗೆ ಅವಶ್ಯಕತೆ ಇದೆ. ನಿಯಮ ಸರಳೀಕೃತ ಮಾಡುವ ಕೆಲಸ ಮಾಡುತ್ತೇವೆ ಎಂದರು.
ಸರ್ಕಾರ ನೇಕಾರರ ಪರ: ನಮ್ಮ ಸರ್ಕಾರ ನೇಕಾರರ ಪರವಾಗಿದೆ. ಜವಳಿ ಪಾರ್ಕ್ ಸ್ಥಾಪನೆಗೆ ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಕೆಲಸ ಪ್ರಾರಂಭ ಮಾಡುತ್ತೇವೆ ಎಂದು ಜವಳಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪೂಜಾರ್ ನೇಕಾರರಿಗೆ ಇವತ್ತು ಜೀವನ ಸಾಗಿಸುವುದು ಕಷ್ಟ ಆಗಿದೆ. ಇವತ್ತು ಕಚ್ಚಾ ವಸ್ತುವಿನ ದರ ಹೆಚ್ಚಳ ಆಗಿದೆ. ನೇಕಾರರ ನೆರವಿಗೆ ಸರ್ಕಾರ ಬರಬೇಕು. ರಾಜ್ಯದ ನೇಕಾರರ ಸಾಲವನ್ನು ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಸರ್ಕಾರ ನೇಕಾರ ಪರ ಇದೆ. 2 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಕೊಡುತ್ತಿದ್ದೇವೆ. ನೇಕಾರ್ ಸಮ್ಮಾನ್ ಯೋಜನೆ 2 ರಿಂದ 5 ಸಾವಿರಕ್ಕೆ ಜಾಸ್ತಿ ಮಾಡಿದೆ. ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಕೊಡ್ತಿದ್ದೇವೆ. ಬಾಗಲಕೋಟೆ ಜವಳಿ ಪಾರ್ಕ್ ಪಿಪಿಪಿ ಮಾದರಿಯಲ್ಲಿ ಸ್ಥಾಪನೆ ಮಾಡುತ್ತೇವೆ. ಜವಳಿ ಪಾರ್ಕ್ ಸ್ಥಾಪನೆಗೆ ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಕೆಲಸ ಪ್ರಾರಂಭ ಮಾಡುತ್ತೇವೆ. ಯಾವುದೇ ನೇಕಾರರು ಗುಳೆ ಹೋಗಿರುವ ಮಾಹಿತಿ ಇಲ್ಲ. ನೇಕಾರರ ಪರ ಸರ್ಕಾರ ಇದೆ ಎಂದು ಹೇಳಿದರು.
ಇದನ್ನೂ ಓದಿ : ಚನ್ನಪಟ್ಟಣ ಕ್ಷೇತ್ರಕ್ಕೆ ಪ್ರಸನ್ನ ಪಿ ಗೌಡ ಕಾಂಗ್ರೆಸ್ ಅಭ್ಯರ್ಥಿ: ಜಿಲ್ಲಾ ಕೈ ಅಧ್ಯಕ್ಷ ಗಂಗಾಧರ್ ಪರೋಕ್ಷ ಘೋಷಣೆ