ಬೆಂಗಳೂರು : ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರದಲ್ಲಿ ಇದ್ದಾಗ ಏನೇನು ಮಾಡಿದ್ದಾರೆ ಅನ್ನೋದು ಮರೆತೋಗಿದೆ. ಈಗ ಅಧಿಕಾರ ಹೋದ ಮೇಲೆ ಇಡೀ ರಾಜ್ಯವೇ ನನ್ನ ವಿರುದ್ಧವಿದೆ ಎಂದುಕೊಂಡಿದ್ದಾರೆ ಎಂದು ಸಚಿವ ಆರ್.ಆಶೋಕ್ ಹೇಳಿದರು.
ಆರ್. ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಚುನಾವಣೆ ಆಯೋಗ ಕಾನೂನು ರೀತಿ ಕ್ರಮ ಕೈಗೊಳ್ಳುತ್ತದೆ. ನಾನು ಸೇರಿದಂತೆ ನಮ್ಮೆಲ್ಲಾ ಸ್ನೇಹಿತರು ನಾಮಪತ್ರ ಸಲ್ಲಿಕೆ ವೇಳೆ ಹೋಗಿದ್ದೆವು. ಆದರೆ, ನಾವು ದೂರದಲ್ಲಿ ಕಾರು ನಿಲ್ಲಿಸಿ, ನಾಮಪತ್ರ ಸಲ್ಲಿಸಿ ಬಂದಿದ್ದೇವೆ. ಕಾಂಗ್ರೆಸ್ ನಾಯಕರು ಬ್ಯಾರಿಕೇಡ್ ಕಿತ್ತು ಹಾಕಿ ಕಾರು ತಗೊಂಡು ಹೋಗಿದ್ದಾರೆ. ರಾಜ್ಯದಲ್ಲಿ ನಮಗೊಂದು ಕಾನೂನು, ಅವರಿಗೊಂದು ಕಾನೂನು ಇದೆಯಾ..? ಅಲ್ಲಿ ಅವರು ತಪ್ಪು ಮಾಡಿರುವ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದರು.
ಸರ್ಕಾರವನ್ನು ಬೈದರೆ ಮಾತ್ರ ನಾಯಕ ಆಗಬಹುದು ಎಂದು ಅವರು ಅಂದುಕೊಂಡಿದ್ದಾರೆ. ಈ ಹಿಂದೆ ಅವರು ದೇವೇಗೌಡರನ್ನು ಬೈದಿದ್ದರು, ಆಮೇಲೆ ಹೊಗಳಿದ್ದಾರೆ. ಇದು ಇವರ ಡಬಲ್ ಸ್ಟ್ಯಾಂಡ್. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಚುನಾವಣೆ ವೇಳೆ ಯಾರೂ ಸರ್ಕಾರ ಹೇಳಿದಂತೆ ಕೆಲಸ ಮಾಡಲ್ಲ. ನಮಗೆ ಏನೋ ಮಾಡಿ ಚುನಾವಣೆ ಮಾಡುವ ಅವಶ್ಯಕತೆ ಇಲ್ಲ. ನಮಗೆ ನಮ್ಮದೇ ಆದ ಶಕ್ತಿ ಇದೆ. ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ತಿರುಗೇಟು ನೀಡಿದರು.
ಒಪ್ಪಂದ ಇಲ್ಲ : ಆರ್.ಆರ್ ನಗರದಲ್ಲಿ ಯಾವುದೇ ಒಳ ಒಪ್ಪಂದ ಇಲ್ಲ. ನಾನು ಬೇಕಿದ್ದರೆ ಡಿಕೆ ಶಿವಕುಮಾರ್ ಅವರನ್ನು ಅಣ್ಣ ಅಂತೀನಿ, ಕುಮಾರಸ್ವಾಮಿ ಅವರನ್ನು ಕುಮಾರಣ್ಣ ಅನ್ನಲ್ವಾ, ಹಾಗೇ ಡಿಕೆಶಿಯನ್ನು ಶಿವಕುಮಾರ್ ಅಣ್ಣ ಅಂತೀನಿ. ಆದರೆ, ಶಿವಕುಮಾರಣ್ಣ ಅನ್ನೋಕೆ ಸ್ವಲ್ಪ ಕಷ್ಟ ಆಗುತ್ತದೆ. ಮಧ್ಯದಲ್ಲಿ ಅವರ ಹೆಸರಿನಲ್ಲಿ ಪದಗಳ ಪ್ರಾಸ ಬರಲ್ಲ. ಹಾಗಾಗಿ, ಅವರನ್ನು ಶಿವಕುಮಾರಣ್ಣ ಅನ್ನೋಕೆ ಆಗಲ್ಲ. ಆದರೆ, ಅವರನ್ನು ಬಂಡೆ ಅಣ್ಣ ಅಂತಾ ಅನ್ನಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇದು ಅವರ ಕನಕಪುರ ಚುನಾವಣೆ ಅಲ್ಲ. ಇದು ರಾಜರಾಜೇಶ್ವರಿನಗರ ಚುನಾವಣೆ. ಇಲ್ಲಿ, ಯಾವುದೂ ಬಂಡೆಗಳಿಲ್ಲ. ಇಲ್ಲಿ ಅವರ ಯಾವುದೇ ಆಟ ನಡೆಯುವುದಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಬಿಜೆಪಿ ಲೀಡ್ ಬಂದಿದೆ. ಇದು ಬಿಜೆಪಿಯ ಪಕ್ಕಾ ಕ್ಷೇತ್ರ. ಮುನಿರತ್ನ ಅವರು ಮಾಡಿರುವ ಕೆಲಸದಿಂದ ಅವರು ಗೆದ್ದಿದ್ದರು. ಈಗ ಸರ್ಕಾರ ಕೊಟ್ಟ ಕಾರ್ಯಕ್ರಮದ ಮೂಲಕ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನವರಿಗೆ ಈ ಚುನಾವಣೆಯಲ್ಲಿ ವಿಶ್ವಾಸ ಇಲ್ಲ : ಕಾಂಗ್ರೆಸ್ನವರು ಬರೀ ತೋರಿಕೆಗಾಗಿ ಚುನಾವಣೆ ಎದುರಿಸ್ತಿದ್ದಾರೆ. ಆರ್.ಆರ್.ನಗರ ಕ್ಷೇತ್ರದಲ್ಲಿ ನಾವು 40 ರಿಂದ 50 ಸಾವಿರ ಮತಗಳ ಅಂತರದಿಂದ ಗೆಲುತ್ತೇವೆ. ಇದನ್ನು ಕಾಂಗ್ರೆಸ್ನವರಿಂದ ತಡೆಯಲು ಸಾಧ್ಯವಿಲ್ಲ ಎಂದರು.
ಡಿಜೆ ಹಳ್ಳಿ ಗಲಭೆ ಬಗ್ಗೆ ಪ್ರತಿಕ್ರಿಯಿಸಿ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ನೀಡಿರುವ ದೂರಿನಲ್ಲಿ ಏನಿದೆ ಎಂಬುವುದನ್ನು ನೋಡಲಿ. ಅಪರಾಧಿಗಳು ಯಾರೆಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಡಿಜೆ ಹಳ್ಳಿ ಪ್ರಕರಣ ಬೆಂಗಳೂರಿಗೆ ಕಪ್ಪುಚುಕ್ಕೆ. ಕಾಂಗ್ರೆಸ್ನವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರ ಒಳ ಜಗಳದಿಂದ ಈ ಘಟನೆ ನಡೆದಿದೆ. ಅಲ್ಲಿನ ಶಾಸಕರು ಹಾಗೂ ಸ್ಥಳೀಯ ಕಾರ್ಪೊರೇಟ್ಗಳ ಒಳ ಜಗಳದಿಂದ ಘಟನೆ ಆಗಿದೆ. ಹೀಗಾಗಿ ಯಾರಿಂದ ಈ ಘಟನೆ ಆಯ್ತು ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.