ಬೆಂಗಳೂರು: ಹಿಜಾಬ್ ಹಾಕಿಕೊಂಡು ಬರುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಸಚಿವ ಆರ್. ಅಶೋಕ್ ಕಿಡಿ ಕಾರಿದರು. ವಿಧಾನಸೌಧಲ್ಲಿ ಮಾತನಾಡಿದ ಅವರು, ಬಿಜಾಪುರ ಜಿಲ್ಲೆಯಲ್ಲಿ ಕುಂಕುಮ ಇಟ್ಟುಕೊಂಡು ಬಂದಿರೋ ಬಗ್ಗೆ ವಿವಾದ ಆಗುತ್ತಿರುವ ಬಗ್ಗೆ ನೋಡಿದ್ದೇನೆ.
ಈಗ ತೀರ್ಪು ಬಂದಿರೋದು ಕೇಸರಿ ಶಾಲು ಹಾಗೂ ಹಿಜಾಬ್ ಬಗ್ಗೆ. ಕೆಲವರು ಶಿಲುಬೆ ಹಾಕಿ ಬರ್ತಾರೆ, ಅದು ವಿಚಾರ ಅಲ್ಲ. ಇದನ್ನ ಡೈವರ್ಟ್ ಮಾಡುವ ಕೆಲಸ ಯಾವುದೇ ಅಧಿಕಾರಿ ಮಾಡಬಾರದು. ಅವರಿಗೆ ಮನಸ್ಸಿಗೆ ಬಂದಂತೆ ಮಾಡಬಾರದು ಎಂದರು.
ಸರ್ಕಾರದಿಂದ ಯಾವುದೇ ಸೂಚನೆ ನೀಡಿಲ್ಲ. ಕುಂಕುಮ ತೆಗೆಯಿರಿ, ಬಳೆ ತೆಗೆಯಿರಿ ಅಂತ. ಕೋರ್ಟ್ ಹೇಳಿರೋದು ಹಿಜಾಬ್, ಕೇಸರಿ ಶಾಲು. ಶಿಕ್ಷಣ ಇಲಾಖೆ ಅಧಿಕಾರಿಗಳು ಬೇರೆ ವಿಚಾರಕ್ಕೆ ಹೋಗಬಾರದು. ಸರ್ಕಾರಿ ಶಾಲೆಗೆ ಮಾತ್ರ ಇದು ಅನ್ವಯ ಎಂದು ತಿಳಿಸಿದರು.
ಹಿಜಾಬ್ ಹಾಕಿಸುತ್ತಿರುವುದೇ ಕಾಂಗ್ರೆಸ್. ಯಾರೂ ಎಲ್ಲೂ ಕೇಸರಿ ಹಾಕಿಕೊಂಡು ಬರ್ತಿಲ್ಲ. ವಿಧಾನಸಭೆಯಲ್ಲಿ ಚರ್ಚೆ ಮಾಡಬೇಕು ಅಂತ ಕೆಲ ಕೈ ಶಾಸಕರು ಮುಂದಾಗಿದ್ದಾರೆ. ಆದರೆ, ಬೇಡ ಅಂತ ಕಾಂಗ್ರೆಸ್ ಪಕ್ಷದಲ್ಲೇ ಹೊಡೆದಾಟ ನಡೆದಿದೆ. ಇದು ಉಡುಪಿಯಲ್ಲಿ ನಡೆದ ಘಟನೆ, ದೇಶಕ್ಕೆ ಹರಡಿದೆ. ಇದಕ್ಕೆ ಪಾಕಿಸ್ತಾನ ಪ್ರಧಾನಿ ಕೂಡ ಕಾಮೆಂಟ್ ಮಾಡಿದ್ದಾರೆ. ಇದರ ಹಿಂದೆ ಬೇರೆ ದೇಶದವರ ಕೈವಾಡ ಇದೆ ಎಂದರು.
ಮಕ್ಕಳಿಗೆ ಶಿಕ್ಷಣ ಮುಖ್ಯ: ವಿದ್ಯೆ ಮುಖ್ಯ, ದೇಶ ಮುಖ್ಯ, ಧರ್ಮ ಮುಖ್ಯ ಅಲ್ಲ. ನಾವು ಪಾಕಿಸ್ತಾನ, ಇರಾಕ್, ಇರಾನ್ನಲ್ಲಿ ನೋಡಿದ್ದೇವೆ. ಸಣ್ಣ ಮಕ್ಕಳ ಕೈಗೆ ಬಂದೂಕು ಕೊಡ್ತಾರೆ. ಸಣ್ಣ ಮಕ್ಕಳನ್ನೂ ಬಿಡದೆ ಕಾಡ್ತಾರೆ. ಶಾಲೆಯಲ್ಲಿ ಧರ್ಮ ಬೇಡ. ಮನೆ, ಹೊರಗೆ ಧರ್ಮ ಆಚರಣೆ ಮಾಡಿ ಎಂದು ಸಚಿವ ಆರ್ ಅಶೋಕ್ ಮನವಿ ಮಾಡಿದರು.
ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಧರಣಿ ಮಾಡ್ತಿರೋ ಕಾಂಗ್ರೆಸ್‌ಗೆ ಎರಡು ಬಾರಿ ಸಂಧಾನ ಮಾಡಿದ್ರೂ ಕೇಳಿಲ್ಲ. ರಾಜ್ಯದ ಜನತೆ ಟ್ಯಾಕ್ಸ್ ಮೇಲೆ ನಾವು ಸಂಬಳ ಪಡೆಯುತ್ತಿದ್ದೇವೆ. ಅವರ ಕಷ್ಟದ ಬಗ್ಗೆ ಧ್ವನಿ ಎತ್ತಬೇಕು. ಪಕ್ಷದ ವಿಚಾರ ಮಾತನಾಡಲು ವಿಧಾನಸೌಧ ಕಟ್ಟಿಲ್ಲ. ವಿಧಾನಸೌಧ ಇರೋದು ಕುಸ್ತಿ ಆಡೋಕೆ ಅಲ್ಲ.
ಬಡವರ ಏಳಿಗೆಗೆ ಈ ದಬ್ಬಾಳಿಕೆ, ದೌರ್ಜನ್ಯ ಕಾಂಗ್ರೆಸ್ ಬಿಡಬೇಕು. ನಿಮ್ಮ ಗೂಂಡಾಗಿರಿ ಬಿಡಿ. ಮೂವತ್ತು, ನಲವತ್ತು ಜನರಿಗಾಗಿ ಪ್ರತಿಭಟನೆ ಮಾಡ್ತಿದ್ದಾರೆ. ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಕಾರ್ಯಕ್ರಮ ಇದೆ. ಅದರ ಬಗ್ಗೆ ಬೇಕೋ ಬೇಡವೋ ಅಂತ ಚರ್ಚೆ ಮಾಡಬೇಕು. ಸೋಮವಾರವಾದ್ರೂ ಸದನದಲ್ಲಿ ಚರ್ಚೆ ಮಾಡಲು ಬಿಡಿ. ನಾವು ಪಡೆಯುತ್ತಿರುವ ಟಿ. ಎ, ಡಿ. ಎ ಬಡವರ ಹಣ ನೆನಪಿರಲಿ ಎಂದು ಸಚಿವ ಅಶೋಕ್ ಟೀಕಿಸಿದರು.
ಓದಿ: ರಸ್ತೆ ಇದ್ದರೂ ಬರಲ್ಲ ಬಸ್.. ಕಿಲೋಮೀಟರ್‌ಗಟ್ಟಲೇ ಕಾಲ್ನಡಿಗೆಯಲ್ಲಿ ಸಾಗುವ ವಿದ್ಯಾರ್ಥಿಗಳು..