ಬೆಂಗಳೂರು : ಬೆಂಗಳೂರು ಉತ್ತರ ಭಾಗದಲ್ಲಿ ಲಾಲ್ಬಾಗ್ ಹಾಗೂ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಎರಡು ಬೃಹತ್ ಉದ್ಯಾನವನ ನಿರ್ಮಾಣ ಹಾಗೂ ಗೊಮ್ಮಟೇಶ್ವರನ ಮಾದರಿಯಲ್ಲಿ ಏಕಶಿಲೆಯಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕಲ್ಲಿನ ಪ್ರತಿಮೆ ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್ ಅಶೋಕ್ ಹಾಗೂ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಅವರು, ಯಲಹಂಕದಿಂದ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಸುಮಾರು 300 ಎಕರೆ ಹಾಗೂ ಬೆಟ್ಟಹಲಸೂರಿನ ಬಳಿ 184 ಎಕರೆ ಪ್ರದೇಶದಲ್ಲಿ ಉದ್ಯಾನವನ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಜಮೀನನ್ನು ಕಂದಾಯ ಇಲಾಖೆಯಿಂದ ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಲಾಗಿದೆ. 184 ಎಕರೆಯಲ್ಲಿ ಯಾವುದೇ ರೈತರ ಜಮೀನು ಇಲ್ಲ. ಪೂರ್ಣ ಸರ್ಕಾರಿ ಜಮೀನಾಗಿದ್ದು, ನಾನು ಮತ್ತು ಮುನಿರತ್ನ ಬೆಂಗಳೂರಿನವರಾಗಿದ್ದು, ಬೆಂಗಳೂರಿನ ಜನರ ಋಣ ತೀರಿಸಲು ಈ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಯಲಹಂಕ ವ್ಯಾಪ್ತಿಯ ಬೆಟ್ಟಹಲಸೂರಿನಲ್ಲಿ 184 ಎಕರೆ ಪ್ರದೇಶದಲ್ಲಿ ಈ ಕೆಂಪೇಗೌಡ ಉದ್ಯಾನವನ ನಿರ್ಮಾಣವಾಗಲಿದೆ. ಈ ಉದ್ಯಾನವನದಲ್ಲಿ ದೇಶ, ವಿದೇಶಗಳಿಂದ ತರಿಸಿದ ಹಣ್ಣಿನ ಗಿಡಗಳು ಮತ್ತು ವಿವಿಧ ಜಾತಿಯ ಮರ, ಗಿಡಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಭೂ ಮಾಫಿಯಾದಿಂದ ಸರ್ಕಾರಿ ಭೂಮಿಯನ್ನು ರಕ್ಷಿಸಲು ಈ ವನ ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. ಬೆಟ್ಟಹಲಸೂರಿನ ಈ ಭೂಮಿ ಸುಮಾರು 700 ಕೋಟಿ ರೂ. ಮೌಲ್ಯದ್ದಾಗಿದ್ದು, ಇದು ಭೂ ಮಾಫಿಯ ಕೈ ಸೇರದಂತೆ ನೋಡಿಕೊಳ್ಳಲು ಮತ್ತು ಬೆಂಗಳೂರಿನ ಉತ್ತರ ಭಾಗಕ್ಕೆ ಬೃಹತ್ ಉದ್ಯಾನವನ್ನು ನೀಡುವ ಉದ್ದೇಶದಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.
ರಾಷ್ಟ್ರದಲ್ಲೇ ಅತ್ಯಪರೂಪವಾದ ಸ್ಥಳವಾಗಿದೆ: ನಾಡಪ್ರಭು ಕೆಂಪೇಗೌಡರ ವಂಶಸ್ಥರು ಬೆಂಗಳೂರಿಗೆ ಬಂದಾಗ ಇಲ್ಲಿನ ಆವತಿ ಸಮೀಪ ನೆಲೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಆವತಿಗೆ ಸಮೀಪದಲ್ಲಿರುವ ಬೆಟ್ಟಹಲಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಉದ್ಯಾನವನಕ್ಕೆ ಕೆಂಪೇಗೌಡರ ಹೆಸರು ಇಡಲು ತೀರ್ಮಾನಿಸಲಾಗಿದೆ. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಈ ಕೆಂಪೇಗೌಡ ವನ ತಲೆ ಎತ್ತಲಿದ್ದು, ರಾಷ್ಟ್ರದಲ್ಲೇ ಅತ್ಯಪರೂಪದ ಸ್ಥಳವಾಗಲಿದೆ. ಕೆಂಪೇಗೌಡ ಉದ್ಯಾನವನ ಕೇವಲ ಉದ್ಯಾನವನವಲ್ಲ, ಆಗಮಿಸುವ ಜನರಿಗೆ ಉಲ್ಲಾಸ ನೀಡುವ ದೃಷ್ಟಿಯಿಂದ ಇಲ್ಲಿ ಥೀಮ್ ಪಾರ್ಕ್ ಸ್ಥಾಪಿಸಲಾಗುವುದು ಮತ್ತು ಇಲ್ಲಿನ ಎರಡು ಕೆರೆಗಳು ದೋಣಿ ವಿಹಾರದ ಕೇಂದ್ರಗಳಾಗಲಿವೆ ಎಂದು ವಿವರಿಸಿದರು.
ವಿವಿಧ ಸರ್ವೇ ನಂಬರ್ಗಳಿಗೆ ಸೇರಿದ ಈ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಮರ, ಗಿಡಗಳನ್ನು ಬೆಳೆಸಲು ಮತ್ತು ಸಂರಕ್ಷಿಸಲು ಉದ್ದೇಶಿಸಲಾಗಿತ್ತು. ಆದರೆ ಈಗ ಅದನ್ನು ತೋಟಗಾರಿಕೆ ಇಲಾಖೆಗೆ ವರ್ಗಾವಣೆ ಮಾಡಲಾಗುವುದು. ಆ ಮೂಲಕ ಬೆಂಗಳೂರು ಉತ್ತರ ಭಾಗದಲ್ಲಿ ಲಾಲ್ಬಾಗ್, ಕಬ್ಬನ್ ಪಾರ್ಕ್ ಮಾದರಿಯ ಉದ್ಯಾನವನ ನಿರ್ಮಾಣಗೊಂಡಂತಾಗುತ್ತದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದ ಅವರು, ಅದೇ ರೀತಿ ಯಲಹಂಕ ಸಮೀಪ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಕುರುಬರ ಹಟ್ಟಿ, ಗೊಲ್ಲರ ಹಟ್ಟಿಯವರಿಗೆ ಹಕ್ಕು ಪತ್ರ : ಈಗಾಗಲೇ ಲಂಬಾಣಿ ತಾಂಡದವರಿಗೆ ಹಕ್ಕುಪತ್ರ ನೀಡಲಾಗಿದ್ದು, ಅದೇ ರೀತಿ ಕುರುಬರ ಹಟ್ಟಿ ಹಾಗೂ ಗೊಲ್ಲರ ಹಟ್ಟಿಯಲ್ಲಿರುವ ಜನರಿಗೂ ಹಕ್ಕು ಪತ್ರ ನೀಡಲು ನಿರ್ಧರಿಸಲಾಗಿದೆ. ಒಂದು ಲಕ್ಷ ಕುಟುಂಬಕ್ಕೆ ಮಾ. 27 ರಂದು ಆಯಾ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡಿ ಹಕ್ಕು ಪತ್ರ ವಿತರಣೆ ಮಾಡಲಾಗುವುದು. ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ. ಅದು ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯಲಿದೆ ಎಂದು ಸಚಿವ ಅಶೋಕ್ ತಿಳಿಸಿದರು.
ನನ್ನ ಹೆಜ್ಜೆ ಗುರುತು ಬಿಟ್ಟು ಹೋಗಬೇಕೆಂಬ ಆಸೆ: ರಾಜ್ಯಕ್ಕೆ ಏನಾದರೂ ಒಂದು ಒಳ್ಳೆ ಕೆಲಸ ಮಾಡಿ ನನ್ನ ಹೆಜ್ಜೆ ಗುರುತು ಬಿಟ್ಟು ಹೋಗಬೇಕೆಂಬುದು ನನ್ನ ಆಸೆ. ಹಾಗಾಗಿ, ಏಕಶಿಲೆ ಕಲ್ಲಿನಿಂದ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಹೆಜ್ಜೆ ಗುರುತು ಬಿಟ್ಟು ಹೋಗಬೇಕು ಅನ್ನುವ ಆಸೆ ನನ್ನಲ್ಲಿದೆ ಎಂದಾಗ, ಪಕ್ಕದಲ್ಲೇ ಇದ್ದ ಸಚಿವ ಅಶೋಕ್ ಅವರು, ಮತ್ತೆ ನಾವೇ ಬರುತ್ತೇವೆಂದು ಹೇಳಪ್ಪ ಎಂದು ಹೇಳಿಕೊಟ್ಟರು. ಇಲ್ಲ, ಈ ಇಲಾಖೆಯಲ್ಲಿ ಮಾತ್ರ ನನ್ನ ಹೆಜ್ಜೆ ಗುರುತು ಬಿಟ್ಟು ಹೋಗುತ್ತೇನೆ ಅಂದೆ ಅಷ್ಟೆ ಎಂದಾಗ, ಹಾಗಾದರೆ ಸರಿ ಎಂದರು.
ಇತಿಹಾಸದಲ್ಲಿ ದಾಖಲಾಗುವ ಯೋಜನೆ ಮಾಡುತ್ತಿದ್ದೇವೆ : ಮಾತು ಮುಂದುವರಿಸಿದ ಅವರು, ಬೆಟ್ಟಹಲಸೂರು ಪಾರ್ಕ್ನಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಬೇಕೆಂಬುದು ನಮ್ಮ ಯೋಜನೆಯಾಗಿದೆ. ಏಕಶಿಲೆಯಲ್ಲಿ ಪ್ರತಿಮೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಖರ್ಚು ವೆಚ್ಚ ಎಷ್ಟಾದರೂ ಅಡ್ಡಿಯಿಲ್ಲ. ಬೆಂಗಳೂರು ನಿರ್ಮಾತೃ ಪ್ರತಿಮೆಗೆ ಖರ್ಚು ಅನ್ ಲಿಮಿಡೆಟ್. ಬೆಂಗಳೂರು ಇತಿಹಾಸದಲ್ಲಿ ದಾಖಲಾಗುವ ಯೋಜನೆ ಮಾಡುತ್ತಿದ್ದೇವೆ ಎಂದರು.
ಬೆಟ್ಟಹಲಸೂರು ಸಮೀಪದಲ್ಲಿ ಪಾರ್ಕ್ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ಜಮೀನು ಹಸ್ತಾಂತರ ಆಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವಿಧಾನಸೌಧಕ್ಕೆ ಇದು ತಕ್ಕಡಿ ಹಿಡಿದಂತೆ ಉದ್ಯಾನವನ ನಿರ್ಮಾಣವಾಗಲಿದೆ. ಮಲೇಷಿಯಾ, ಸಿಂಗಾಪುರದ ಕಂಪನಿಗಳು ಇದನ್ನು ಅಭಿವೃದ್ಧಿ ಮಾಡಲು ಮುಂದೆ ಬಂದಿದ್ದಾರೆ. ಸಂಪೂರ್ಣವಾಗಿ ತೋಟಗಾರಿಕೆ ಇಲಾಖೆಗೆ ಇದರ ಜವಾಬ್ದಾರಿ ತೆಗೆದುಕೊಂಡಿದ್ದೇವೆ. 100 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಪ್ರತಿಮೆಯನ್ನು ಮೀರಿಸುವ ಅತೀ ದೊಡ್ಡ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ಗ್ರಾಮೀಣ ಭಾಗದ ಮಂದಿ ಕೆಲಸವಿಲ್ಲದೆ ಇರಬಾರದು: ಸಿಎಂ ಬಸವರಾಜ ಬೊಮ್ಮಾಯಿ