ಬೆಂಗಳೂರು: ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಏಳೆಂಟು ತಪ್ಪುಗಳಾಗಿದ್ದವು. ಅದನ್ನು ಸರಿಪಡಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಸವಣ್ಣ, ಸಿದ್ದಗಂಗಾ ಶ್ರೀ, ಸಂವಿಧಾನಶಿಲ್ಪಿ ಅಂಬೇಡ್ಕರ್, ಆದಿಚುಂಚನಗಿರಿ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿನ ಲೋಪಗಳನ್ನು ಸರಿಪಡಿಸಿ ಅದನ್ನು ಪಠ್ಯಕ್ಕೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದರು.
ಹಿಂದೂ ದೇವರು ಇರಬಾರದು, ಸ್ವಾತಂತ್ರ್ಯ ಹೋರಾಟಗಾರರು ಇರಬಾರದು ಎಂಬುದು ಅವರ(ಕಾಂಗ್ರೆಸ್) ಚಿಂತನೆ. ಭಾರತೀಯ ಪರಂಪರೆ, ಭಾರತೀಯ ಸಂಸ್ಕೃತಿಯನ್ನು ನಾವು ಸೇರಿಸಿದ್ದೇವೆ. ಅವರ ಕಾಲದಲ್ಲಿ ಪಠ್ಯದಲ್ಲಿ 150 ತಪ್ಪುಗಳು ಆಗಿದ್ದವು. ಆದರೀಗ 7-8 ತಪ್ಪುಗಳನ್ನು ದೊಡ್ಡದಾಗಿ ಬಿಂಬಿಸಿದ್ದಾರೆ. ಹಳೇ ಪಠ್ಯವನ್ನೇ ಮುಂದುವರಿಸಿ ಎಂದು ಆಗ್ರಹಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಪರಿಷ್ಕೃತ ಪಠ್ಯ ಪುಸ್ತಕ ಸಮಿತಿ, ರಾಷ್ಟ್ರಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕುರಿತ ಗದ್ಯ, ಅಜ್ಜಯ್ಯನ ಅಭ್ಯಂಜನ ಕೈ ಬಿಟ್ಟಿತ್ತು. ಬೆಂಗಳೂರು ಪರಿಚಯಿಸುವ ಪಾಠದಲ್ಲಿ ನಾಡಪ್ರಭು ಕೆಂಪೇಗೌಡ ಉಲ್ಲೇಖವಿರಲಿಲ್ಲ. ರಾಷ್ಟ್ರಧ್ವಜ ಕುರಿತ ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ಪದ್ಯ, ನಾಡಿನ ಅಭಿಮಾನದ ಗೀತೆ ಚೆಲುವ ಕನ್ನಡ ನಾಡಿದು ಎಂಬ ಗೀತೆ ತೆಗೆಯಲಾಗಿದೆ. ಮೈಸೂರು ನಗರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಹರಡಿದೆ. ಬೆಟ್ಟದ ಮೇಲಿನ ಚಾಮುಂಡೇಶ್ವರಿ ದೇವಿ ಮೈಸೂರು ಮನೆತನದ ಆಧಿದೇವತೆ ಎಂಬ ಪ್ರಮುಖ ಅಂಶಗಳನ್ನು ತೆಗೆಯಲಾಗಿದೆ ಎಂದು ಆರೋಪಿಸಿದರು.
ದೇವಾಲಯ ಚಿತ್ರಗಳನ್ನು ಕೈಬಿಡಲಾಗಿತ್ತು. ಮಥುರ ಶ್ರೀ ಕೃಷ್ಣ ಮಂದಿರ ಮತ್ತು ಸೋಮನಾಥ ದೇವಾಲಯದ ಅಂಶಗಳನ್ನು ಕೈಬಿಡಲಾಗಿದೆ. ಭಾರತದ ಮಹಾರಾಜರ ಕೊಡುಗೆಗಳ ಕಡೆಗಣನೆ ಮಾಡಲಾಗಿದೆ. ದಿಲ್ಲಿ ಸುಲ್ತಾನರ ಕಾಲದ ಖಿಲ್ಜಿ ಕಾಲದ ಗುಲಾಮಗಿರಿ ಅಂಶ ಕೈ ಬಿಡಲಾಗಿತ್ತು. ವಿಜಯನಗರ ಮರೆಯಲಾಗದ ಸಾಮ್ರಾಜ್ಯ ಎಂಬ ಪಾಠದ ಹೆಸರು ಮತ್ತು ಕೆಲವು ಅಂಶಗಳಿಗೆ ಕತ್ತರಿ ಹಾಕಲಾಗಿದೆ. ಮಹಾತ್ಮ ಗಾಂಧಿಯವರ ಭಾರತ ಪಾಕಿಸ್ತಾನ ವಿಭಜನೆ ನಂತರ ಮತೀಯ ಗಲಭೆ ನಿಯಂತ್ರಿಸಲು ಕೋಲ್ಕತ್ತಾದಲ್ಲಿ ಗೀತೆಯನ್ನು ಪಠಿಸುತ್ತಿದ್ದರು ಎಂಬ ಅಂಶಕ್ಕೆ ಕತ್ತರಿ ಹಾಕಲಾಗಿದೆ. ಮತೀಯ ಯುದ್ಧಗಳ ಕುರಿತಾದ ಅಂಶಗಳಿಗೆ ಕತ್ತರಿ ಹಾಕಲಾಗಿತ್ತು. ಶಿವಾಜಿ ಮಹಾರಾಜರ ಉಲ್ಲೇಖವನ್ನು ಕೈ ಬಿಡಲಾಗಿದ್ದರೆ, ಚಂಗೀಸ್ ಖಾನ್ ಮತ್ತು ತೈಮೂರ್ ದಾಳಿಗಳ ಅಂಶಗಳನ್ನು ತೆಗೆಯಲಾಗಿದೆ. ರಜಪೂತರ ಗುಣ ಧರ್ಮಗಳನ್ನು ಕೈ ಬಿಟ್ಟು ಮೊಘಲರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಟಿಪ್ಪುವಿನ ಅತಿಯಾದ ವೈಭವೀಕರಣ ಮಾಡಲಾಗಿದೆ ಎಂದು ಸಚಿವ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ಅದು ದೇವೇಗೌಡರ ಚಿಂತನೆ.. ಮೋದಿ ಅಡಿಗಲ್ಲು ಹಾಕಿರೋದೇ ಸಾಧನೆನಾ? ಹೆಚ್ಡಿಕೆ ಪ್ರಶ್ನೆ
ದೇವೇಗೌಡರ ಪತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಅಶೋಕ್, ದೇವೇಗೌಡರು ನಮ್ಮ ಹಿರಿಯ ಮುಖಂಡರಾಗಿದ್ದಾರೆ. ಆ ಬಗ್ಗೆ ಸಿಎಂ ಬೊಮ್ಮಾಯಿ ಅವರು ಸಭೆ ನಡೆಸಿದ್ದಾರೆ. ಅವರು ಬರೆದ ಪತ್ರಕ್ಕೆ ಸಿಎಂ ಉತ್ತರ ಕೊಡುತ್ತಾರೆ. ಅವರಿಗೆ ಸ್ಪಷ್ಟ ಉತ್ತರ ನೀಡಲಾಗುತ್ತದೆ ಎಂದರು.