ಬೆಂಗಳೂರು: ಪದೇ ಪದೆ ಲಘು ಭೂಕಂಪನ, ಭೂಕುಸಿತ ನಡೆಯುತ್ತಿರುವ ದ.ಕನ್ನಡ, ಕೊಡಗು ಜಿಲ್ಲೆಗೆ ಹೈದರಾಬಾದ್ ತಜ್ಞರ ತಂಡ ಶೀಘ್ರವೇ ಭೇಟಿ ನೀಡಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡ ಮಣ್ಣೊಂಗೇರಿ, ಚೆಂಬು, ಸಂಪಾಜೆ, ಕರಿಕೆ ಮುಂತಾದೆಡೆ ಈ ಸಮಸ್ಯೆ ಬಾಧಿಸಿದೆ. ಅದರ ಕಾರಣ ತಿಳಿದುಕೊಳ್ಳಲು ತಜ್ಞರ ತಂಡವನ್ನು ಕರೆಯಿಸಿಕೊಳ್ಳಲಾಗುತ್ತಿದೆ.
ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಭೂಗರ್ಭ ಸಂಶೋಧನಾ ಸಂಸ್ಥೆ (ಎನ್‌ಜಿಆರ್‌ಐ) ತಜ್ಞರ ತಂಡವು ಅಗತ್ಯ ಸಾಧನ - ಸಲಕರಣೆಗಳೊಂದಿಗೆ ಆಗಮಿಸಿ, ಒಂದು ವಾರ ಕಾಲ ಕೊಡಗು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿ ಅಧ್ಯಯನ ನಡೆಸಲಿದೆ. ಮಂಗಳವಾರ ಅಥವಾ ಬುಧವಾರ ಬರುವ ನಿರೀಕ್ಷೆ ಇದೆ ಎಂದರು.
ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ: ಭೂಕಂಪನವನ್ನು ರಿಕ್ಟರ್ ಮಾಪಕದಲ್ಲಿ ನಿರಂತರ ದಾಖಲು ಮಾಡಿ, ನಿಗಾವಹಿಸಲು ಸೂಚಿಸಲಾಗಿದೆ. ಅಪಾಯದ ಲಕ್ಷಣಗಳನ್ನು ಮುಂಚಿತವಾಗಿ ಅರಿತು ಜನರಿಗೆ ಮಾಹಿತಿ ನೀಡುವ ಜತೆಗೆ ತಾತ್ಕಾಲಿಕವಾಗಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.
ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಈ ಹಿಂದೆ ಭೂಕುಸಿತ, ಬೆಟ್ಟಗಳ ಜರಿತ ಸಂಭವಿಸಿದ ಪ್ರದೇಶಕ್ಕೆ ತಜ್ಞರ ತಂಡ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಅತಿಯಾದ ವಾಣಿಜ್ಯ ಚಟುವಟಿಕೆಗಳು, ಮರಗಳ ಕಡಿತ ಮುಂತಾದ ಚಟುವಟಿಕೆಗಳು ಒತ್ತಡದ ಪರಿಸ್ಥಿತಿ ಸೃಷ್ಟಿಸಿ ಈ ಸಮಸ್ಯೆ ತಂದೊಡ್ಡಿದೆ ಎಂದು ತಜ್ಞರು ವರದಿಯಲ್ಲಿ ತಿಳಿಸಿದ್ದರು.
ತಜ್ಞರ ಸಲಹೆಯಂತೆ ಅಪಾಯಕಾರಿ ವಲಯಗಳೆಂದು ಗುರುತಿಸಿದ, ಭೂಮಿ ಬಿರುಕು ಬಿಟ್ಟ ಸ್ಥಳಗಳ ಆಸುಪಾಸು ಭೂಪರಿವರ್ತನೆ, ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿ ಆದೇಶಿಸಲಾಗಿದೆ ಎಂದು ವಿವರಿಸಿದರು.
ಅನಧಿಕೃತ ಹೋಂ ಸ್ಟೇ ವಿರುದ್ಧ ಕ್ರಮ: ಮಾಹಿತಿ ಪ್ರಕಾರ ಕೊಡಗು ಜಿಲ್ಲೆಯೊಂದರಲ್ಲಿ 750 ಅಧಿಕೃತ ಹೋಂ ಸ್ಟೇಗಳಿದ್ದರೆ, 4,000ಕ್ಕೂ ಹೆಚ್ಚು ಅನಧಿಕೃತವಾಗಿವೆ. ಇವುಗಳಿಗೆ ಮೂಗುದಾರ ಹಾಕುವ ಅಗತ್ಯ ಇದೆ. ಈ ಸಂಬಂಧ ಜಂಟಿ ಸಮೀಕ್ಷೆ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೊದಲ ಹಂತವಾಗಿ ಕೊಡಗು ಜಿಲ್ಲೆಯಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗಳು ಜಂಟಿಯಾಗಿ ಹೋಂ ಸ್ಟೇಗಳ ಸಮೀಕ್ಷೆ ನಡೆಸಲಿದ್ದು, ವರದಿ ಕೈಸೇರಿದ ಬಳಿಕ ಕಾನೂನು ರೀತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಮಳೆಗಾಲದ ಅಧಿವೇಶನಕ್ಕೆ ಮಸೂದೆ: ರಾಜ್ಯದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಕಾಫಿ, ಏಲಕ್ಕಿ, ರಬ್ಬರ್ ಬೆಳೆಯುತ್ತಿರುವ ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡುವ ಚಿಂತನೆಯಿದೆ. ಒತ್ತುವರಿ ಜಮೀನಿನ ಒಡೆತನ ಸರ್ಕಾರದ ಹೆಸರಿನಲ್ಲೇ ಉಳಿಯಲಿದ್ದು, ಆದಾಯವೂ ಬರಲಿರುವ ಕಾರಣ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಈ ಸಂಬಂಧ ಮಸೂದೆಯನ್ನು ವಿಧಾನ ಮಂಡಲದ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ವಿವರಿಸಿದರು.
ಇದನ್ನೂ ಓದಿ : ವಿವಾದಾತ್ಮಕ ಹೇಳಿಕೆ ನೀಡಿದ ಕರ್ಣಿ ಸೇನೆ ರಾಷ್ಟ್ರೀಯ ಅಧ್ಯಕ್ಷ ಸೂರಜ್ ಪಾಲ್ ಅಮ್ಮು