ಬೆಂಗಳೂರು: ಜಾತ್ಯತೀತ ಜನತಾ ದಳ (ಜೆಡಿಎಸ್) ಅಭ್ಯರ್ಥಿಗಳ ಮೊದಲ ಪಟ್ಟಿ, ಕಾಂಗ್ರೆಸ್ ಪಕ್ಷ ಎರಡು ಪಟ್ಟಿಗಳನ್ನು ಘೋಷಣೆ ಮಾಡಿದ್ದವು. ಬಳಿಕ ತೀವ್ರ ಕುತೂಹಲ ಮೂಡಿಸಿದ್ದ ಮತ್ತು ಆಕಾಂಕ್ಷಿಗಳು ಕಾತರದಿಂದ ಕಾಯುತ್ತಿದ್ದ ಬಿಜೆಪಿಯ ಮೊದಲ ಪಟ್ಟಿ ಕೊನೆಗೂ ಬಿಡುಗಡೆ ಆಗಿದೆ. ಈ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರೆ, ಇನ್ನೂ 35 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.
ಕಂದಾಯ ಸಚಿವ ಆರ್ ಅಶೋಕ್ ಮತ್ತು ವಸತಿ ಸಚಿವ ವಿ. ಸೋಮಣ್ಣ ಅವರು ನಿರೀಕ್ಷಿಸದ ರೀತಿ ಉಭಯ ನಾಯಕರಿಗೆ ತಲಾ ಕ್ಷೇತ್ರಗಳಲ್ಲಿ ಟಿಕೆಟ್ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತು ಮಾತನಾಡಿರುವ ಸಚಿವ ಅಶೋಕ್ ಅವರು, ಕನಕಪುರದಲ್ಲಿ ಸ್ಪರ್ಧೆ ಮಾಡಬೇಕು ಎನ್ನುವುದು ನನ್ನ ತೀರ್ಮಾನವಲ್ಲ, ಪಕ್ಷದ ತೀರ್ಮಾನ, ನಾನು ಪಕ್ಷದ ಸೈನಿಕ, ನಮ್ಮ ಕಮಾಂಡರ್ ಮೋದಿ, ಅಮಿತ್ ಶಾ, ಅವರು ಹೇಳಿದಂತೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮೊದಲನೇದಾಗಿ ಬಿಜೆಪಿಯ ಸೈನಿಕ. ನಮ್ಮ ಕಮಾಂಡರ್ ಮೋದಿ, ಅಮಿತ್ ಶಾ ಅವರು ಏನು ಹೇಳುತ್ತಾರೋ ಹಾಗೆ ಮಾಡಬೇಕು. ನಾನು ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿದ್ದೆ. ಬಾಬರಿ ಮಸೀದಿ ಧ್ವಂಸ ಸಮಯದಲ್ಲೂ ಹೋರಾಟ ಮಾಡಿದ್ದೆ. ಹಾಗೆ ಈಗ ನಮ್ಮ ನಾಯಕರು ಎರಡು ಕಡೆ ಸ್ಪರ್ಧೆ ಮಾಡಿ ಅಂತ ಹೇಳಿದ್ದಾರೆ. ಕನಕಪುರದಲ್ಲಿ ಸ್ಪರ್ಧೆ ಮಾಡಬೇಕು ಅನ್ನೋದು ಪಕ್ಷದ ತೀರ್ಮಾನವೇ ಹೊರತು ನನ್ನ ತೀರ್ಮಾನ ಅಲ್ಲ ಎಂದರು.
ಇದೊಂದು ಸ್ಟ್ರಾಟಜಿ, ನಮ್ಮ ಗೆಲುವು ಶತಸಿದ್ಧ. ಇಂದಿರಾ ಗಾಂಧಿ, ಯಡಿಯೂರಪ್ಪ, ಸಿದ್ದರಾಮಯ್ಯ, ದೇವೇಗೌಡರೂ ಸೋತಿದ್ದಾರೆ. ಜನರ ಇಚ್ಛೆ ಏನು ಅನ್ನೋದು ಕಾದು ನೋಡೋಣ ಎಂದ ಅಶೋಕ್, ಹೊಂದಾಣಿಕೆ ರಾಜಕೀಯ ಮಾಡ್ತಾರೆ ಎಂಬುದಕ್ಕಾಗಿ ಈ ಸ್ಟ್ರಾಟಜಿ ನಾ ಎಂಬ ಪ್ರಶ್ನೆಗೆ, ನೆಗೆಟಿವ್ ಪ್ರಶ್ನೆಗೆ ಉತ್ತರಿಸಲ್ಲ ಎಂದು ತೆರಳಿದರು.
ಗೂಳಿಹಟ್ಟಿ ಬದಲು ಟಿಕೆಟ್ ಪಡೆದ ಬಿಎಸ್ವೈ ಆಪ್ತ: ಹೊಸದುರ್ಗ ಕ್ಷೇತ್ರದ ಅಭ್ಯರ್ಥಿ ಎಸ್ ಲಿಂಗಮೂರ್ತಿ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಬಿ ಎಸ್ ಯಡಿಯೂರಪ್ಪ ಅಪ್ತ ಅಗಿರೋ ಲಿಂಗಮೂರ್ತಿ ಟಿಕೆಟ್ ಸಿಕ್ಕ ಖುಷಿಗೆ ಬಿಎಸ್ವೈ ಅವರಿಗೆ ಧನ್ಯವಾದ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಇದು ಬಹಳ ಸಂತೋಷ ತಂದ ಗಳಿಗೆ, ನನ್ನನ್ನು ಅಯ್ಕೆ ಮಾಡಿದ ವರಿಷ್ಠರಿಗೆ ಮತ್ತು ನನ್ನ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ನಡೆದು ಬಂದಿದ್ದೇನೆ. ಸರ್ವೆ ಮತ್ತು ಯಡಿಯೂರಪ್ಪ ಮಾರ್ಗದರ್ಶನದಂತೆ ಪಕ್ಷ ನನಗೆ ಟಿಕೆಟ್ ಕೊಟ್ಟಿದೆ ಎಂದು ಹೇಳಿದರು.
ಇದನ್ನೂ ಓದಿ: ಸಚಿವ ಅಂಗಾರ, ರಘುಪತಿ ಭಟ್ ಸೇರಿ 7 ಹಾಲಿ ಶಾಸಕರಿಗಿಲ್ಲ ಬಿಜೆಪಿ ಟಿಕೆಟ್: ಇನ್ನೂ 16 ಹಾಲಿಗಳ ಕ್ಷೇತ್ರ ಕುತೂಹಲ!