ಬೆಂಗಳೂರು: ಕಾಂಗ್ರೆಸ್ ವಿರೋಧ ಪಕ್ಷವಾಗಿ ಹಗರಣದ ಆರೋಪ ಮಾಡುತ್ತಿದೆ. ಅವರು ತನಿಖೆ ಮಾಡಿ ಎಂದು ಹೇಳಿದಾಕ್ಷಣ ನಾವು ಮಾಡೋದಕ್ಕೆ ಆಗಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ಪತ್ರ ಬರೆದ ತಕ್ಷಣ ಉತ್ತರ ಕೊಡೋದಕ್ಕೆ ಆಗಲ್ಲ. ಅವರ ಸರ್ಕಾರ ಇದ್ದಾಗ ನಾವೂ ಸಾವಿರ ಪತ್ರಗಳನ್ನು ಬರೆದಿದ್ದೆವು. ಅವರು ಎಷ್ಟಕ್ಕೆ ಉತ್ತರ ಕೊಟ್ಟಿದಾರೆ. ಸ್ವಲ್ಪ ಕಾಲಾವಕಾಶ ತೆಗೆದುಕೊಂಡು ಉತ್ತರ ಕೊಟ್ಟೇ ಕೊಡುತ್ತೇವೆ. ಬೇಕಾದರೆ ಆರ್ಟಿಐನಲ್ಲೂ ದಾಖಲೆಗಳನ್ನು ಪಡೆದುಕೊಳ್ಳಲಿ. ಎಸಿಬಿಗೆ ಬೇಕಾದ್ರೂ ತನಿಖೆಗೆ ಕೊಡಲಿ. ಅವರೇ ನೇಮಕ ಮಾಡಿದ ಎಸಿಬಿ ಮೇಲೆ ಅವರಿಗೆ ನಂಬಿಕೆ ಇದೆಯಲ್ವಾ ಎಂದರು.
ಸಿಎಂ ಬಿಎಸ್ವೈ ನೇತೃತ್ವದ ಸರ್ಕಾರ ಒಂದು ವರ್ಷ ಜನಪರವಾಗಿ ಕೆಲಸ ಮಾಡಿದೆ. ಪ್ರಾರಂಭದಲ್ಲೇ ನೆರೆ ಉಂಟಾಗಿತ್ತು. ಯಡಿಯೂರಪ್ಪ ಹೊರತುಪಡಿಸಿ ಬೇರೆ ಯಾರೇ ಇದ್ದಿದ್ರೂ ಅಂತಹ ಪರಿಸ್ಥಿತಿ ನಿಭಾಯಿಸಲು ಆಗುತ್ತಿರಲಿಲ್ಲ. ಕೊರೊನಾ ಸಂದರ್ಭದಲ್ಲಿ ಕೂಡಾ ಸಮರ್ಥವಾಗಿ ನಿಭಾಯಿಸಿದ್ದಾರೆ. ಅಕ್ಕಪಕ್ಕದ ರಾಜ್ಯಗಳು ಸಂಬಳ ಕೊಡಲೂ ಯೋಚಿಸಬೇಕಾದಂತಹ ಸ್ಥಿತಿ ಇತ್ತು. ಆದರೆ ನಮ್ಮಲ್ಲಿ ಕಷ್ಟದ ಸಂದರ್ಭದಲ್ಲಿ ಕೂಡ ಸಂಬಳ ತಡೆಯುವ ಕೆಲಸ ಮಾಡಲಿಲ್ಲ. ಈ ವರ್ಷ ದಾಖಲೆ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ. ಇದು ನಾವು ರೈತಪರ ಇದ್ದೇವೆ ಅನ್ನೋದಕ್ಕೆ ಸಾಕ್ಷಿ ಎಂದು ಹೇಳಿದರು.