ಬೆಂಗಳೂರು : ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಮೇಲೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ವೈಎಸ್ಟಿ ಮತ್ತು ವಿಎಸ್ಟಿ ಟ್ಯಾಕ್ಸ್ ಬಗ್ಗೆ ಸಾಕ್ಷಿಗಳು ಇದ್ದರೆ ಕೊಡಿ. ಅದರ ಬಗ್ಗೆ ನಾವು ತನಿಖೆ ಮಾಡುತ್ತೇವೆ. ವೈಎಸ್ಟಿ ಅಂದ್ರೆ ಏನು ಅನ್ನೋದರ ಬಗ್ಗೆ ಮೊದಲು ಹೇಳಿ. ಹೆಚ್ ಡಿ ಕುಮಾರಸ್ವಾಮಿ ಹಿರಿಯರಿದ್ದಾರೆ ನೋಡಿಕೊಂಡು ಮಾತನಾಡಬೇಕು. ಸುಮ್ಮನೆ ಹಿಟ್ ಅಂಡ್ ರನ್ ಬೇಡ ಎಂದು ಕಿಡಿಕಾರಿದರು.
ರಾಜ್ಯದ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಅದನ್ನು ತೊಳೆಯುವ ಕೆಲಸ ನಾವು ಮಾಡ್ತಿದ್ದೇವೆ. ಶೇ 40ರಷ್ಟು ಕಮಿಷನ್ ಬಗ್ಗೆ ಕೂಡ ತನಿಖೆ ನಡೆಸುತ್ತಿದ್ದೇವೆ. ಹಿಂದಿನ ಸರ್ಕಾರದ ಮೇಲೆ ನಾವು ಭ್ರಷ್ಟಾಚಾರ ಆರೋಪ ಮಾಡಿದ್ವಿ. ಅದರ ದಾಖಲೆ ಇಟ್ಟುಕೊಂಡು ನಾವು ಮಾತನಾಡಿದ್ದೇವೆ. ಕುಮಾರಸ್ವಾಮಿ ಅವರ ಬಳಿ ದಾಖಲೆ ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.
ಮೊದಲು ವಿಪಕ್ಷ ನಾಯಕರು ಯಾರು ಅನ್ನೋದು ಬಿಜೆಪಿ ನಿರ್ಧಾರ ಮಾಡಲಿ. ಬಿಜೆಪಿ ಅಧಿಕಾರದಲ್ಲಿದ್ದಾಗ ಮನೆಯೊಂದು ಮೂರು ಬಾಗಿಲು ಆಗಿತ್ತು. ಈಗ ವಿಪಕ್ಷದಲ್ಲಿದ್ದಾಗ ಬಿಜೆಪಿ ಮನೆಯೊಂದು ನೂರು ಬಾಗಿಲಾಗಿದೆ. ಮೊದಲು ಬಿಜೆಪಿ ವಿಪಕ್ಷ ನಾಯಕರು ಯಾರು ಎಂದು ತೀರ್ಮಾನ ಮಾಡಲಿ. ಆಮೇಲೆ ನಮ್ಮ ಗ್ಯಾರಂಟಿ ಬಗ್ಗೆ ಮಾತಾಡಲಿ ಎಂದು ಟೀಕಿಸಿದರು.
ರಾಜ್ಯದಲ್ಲಿ ವೈಎಸ್ಟಿ ತೆರಿಗೆ ಜಾರಿಗೆ ಬಂದಿದೆ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹೊಸದಾಗಿ ವೈಎಸ್ಟಿ (YST) ತೆರಿಗೆ ಆರಂಭವಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು (ಜುಲೈ 2-2023) ಆರೋಪ ಮಾಡಿದ್ದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ್ದ ಅವರು, ವೈಎಸ್ಟಿ ಎಂದರೆ ಏನು? ಎಂದು ಕೇಳಿದ ಪ್ರಶ್ನೆಗೆ ಮಧ್ಯರಾತ್ರಿವರೆಗೂ ತಮ್ಮ ಮನೆಗಳಲ್ಲಿ ಅಧಿಕಾರಿಗಳ ಸಭೆ ಮಾಡುವ ಘನಂದಾರಿ ವ್ಯಕ್ತಿಗಳನ್ನು ಕೇಳಿ? ಈಗಾಗಲೇ ವರ್ಗಾವಣೆ ದಂಧೆಗಾಗಿ ಯಾರನ್ನೆಲ್ಲ ಫೀಲ್ಡಿಗೆ ಇಳಿಸಿ ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೋ ಅವರನ್ನೇ ಕೇಳಿ? ನೀವೂ ಪತ್ತೆ ಹಚ್ಚಿ ಎಂದಿದ್ದರು.
ವರ್ಗಾವಣೆ ದಂಧೆ ಬಗ್ಗೆ ತಮ್ಮ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟಿರುವ ಹೇಳಿಕೆ ಬಗ್ಗೆ ಕಿಡಿಕಾರಿದ್ದ ಹೆಚ್ಡಿಕೆ, ನಾನು ಸಿದ್ದರಾಮಯ್ಯ ಅವರನ್ನು ಕೇಳಲು ಬಯಸುತ್ತೇನೆ. ನಿಮ್ಮ ಪಕ್ಷದ ಜತೆ ಸರ್ಕಾರ ರಚನೆ ಮಾಡಿದ್ದಾಗ ನೀವೆಲ್ಲ ಏನೇನು ಮಾಡಿದಿರಿ ಎನ್ನುವುದು ಗೊತ್ತಿದೆ. ಪೊಗದಸ್ತಾದ ಇಲಾಖೆಗಳನ್ನು ಇಟ್ಟುಕೊಂಡಿದ್ದ ನಿಮ್ಮ ಮಂತ್ರಿಗಳು ಏನು ಮಾಡಿದರು?. ಮುಖ್ಯಮಂತ್ರಿಯಾಗಿ ನಾನು ಯಾವೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆಯೇ ಇರಲಿಲ್ಲ. ಎಲ್ಲ ದಂಧೆಗಳು ಯಾರ ಮೂಗಿನಡಿ ನಡೆಯುತ್ತಿದ್ದವು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಹಣ ಕೊಟ್ಟು ಪೋಸ್ಟ್ ಪಡೆಯಲು ಬಂದವರನ್ನು ನಾನು ದೂರ ಇಟ್ಟಿದ್ದೆ. ಬಿಡಿಎ ಮೇಲೆ ಬಂದು ಕೂರಲು ಬಂದ ಅಧಿಕಾರಿಯನ್ನು ಹೊರಗಟ್ಟಿದ್ದೆ. ಯಲಹಂಕ ತಹಶೀಲ್ದಾರ್ ಹುದ್ದೆಗೆ ಒಂದೂವರೆ ಕೋಟಿ ಕೊಡ್ತೀವಿ ಅಂದವರನ್ನು ಆಚೆಗೆ ಇಟ್ಟಿದ್ದೆ. ಇದು ನಾನು ನಡೆಸಿದ್ದ ಆಡಳಿತ. ಈಗ ನೋಡಿದರೆ ವೈಎಸ್ಟಿ ತೆರಿಗೆ ಅಂತ ಇವರು ಶುರು ಮಾಡಿಕೊಂಡಿದ್ದಾರೆ ಎಂದು ಟೀಕೆ ಮಾಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ವೈಎಸ್ಟಿ ತೆರಿಗೆ ಜಾರಿಗೆ ಬಂದಿದೆ: ಹೆಚ್ ಡಿ ಕುಮಾರಸ್ವಾಮಿ