ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕಂಪನಿಗಳನ್ನು ಒಳಗೊಂಡ ನ್ಯಾಸ್ಕಾಮ್ (NASSCOM) ಪ್ರತಿನಿಧಿಗಳ ನಿಯೋಗ ಹಾಗೂ ಟೊಯೊಟಾ ಸಂಸ್ಥೆಯ ಪ್ರತಿನಿಧಿಗಳು ಇಂದು ಪ್ರತ್ಯೇಕವಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಹಲವಾರು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಮುಖವಾಗಿ ಬೆಂಗಳೂರಿನಲ್ಲಿರುವ ಮಾಹಿತಿ ತಂತ್ರಜ್ಞಾನ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ ಅಭ್ಯೃರ್ಥಿಗಳನ್ನು ಕೌಶಲ್ಯಪೂರ್ಣರಾಗಿಸಿ, ಮಾಹಿತಿ ತಂತ್ರಜ್ಞಾನ ಕಂಪನಿಗಳ ಉದ್ಯೋಗಕ್ಕೆ ಸಜ್ಜು ಮಾಡುವ ಬಗ್ಗೆ ಚರ್ಚಿಸಲಾಯಿತು. ಕರ್ನಾಟಕದ ಎಂಜಿನಿಯರಿಂಗ್ ಕಾಲೇಜುಗಳ ಮೂಲಕ ಪ್ರತಿ ವರ್ಷ ಹೊರ ಬರುತ್ತಿರುವ ಕನ್ನಡ ನಾಡಿನ ಯುವಕ- ಯವತಿಯರಿಗೆ ಐಟಿ ಕಂಪನಿಗಳಲ್ಲಿ ಉದ್ಯೋಗಕ್ಕೆ ಅವಕಾಶ ಮಾಡಿಕೊಡುವ ಸರ್ಕಾರದ ಆಶಯವನ್ನು ಐಟಿ ಸಂಸ್ಥೆಗಳ ಪ್ರತಿನಿಧಿಗಳು ಸ್ವಾಗತಿಸಿದರು.
ರಾಜ್ಯ ಸರ್ಕಾರ ಈ ಸಂಬಂಧ ಕೂಲಂಕಶವಾಗಿ ಪರಿಶೀಲಿಸಿ ನಾಡಿನ ಯುವಕ, ಯುವತಿಯರಿಗೆ ಉದ್ಯಮಕ್ಕೆ ಅವಶ್ಯಕವಾದ ಕೌಶಲ್ಯಗಳ ತರಬೇತಿ ನೀಡುವ ವಿಶೇಷ ಕಾರ್ಯಕ್ರಮವನ್ನು ಸಿದ್ದಪಡಿಸುವುದಾಗಿ ಪ್ರಿಯಾಂಕ್ ಖರ್ಗೆ ಪ್ರಕಟಿಸಿದರು. ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಐಟಿ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮಾಹಿತಿ ತಂತ್ರಜ್ಞಾನ ಸಚಿವರೊಂದಿಗೆ ನಡೆಸಿದ ಪ್ರಥಮ ಸಭೆ ಇದಾಗಿತ್ತು.
ಸಭೆಯಲ್ಲಿ ದೀಪೇಂದ್ರ ಮಾಥೂರ್ (ಇನ್ಫೋಸಿಸ್), ಕಿರಣ್ ವ್ಯಗಾಸ್ (ಹ್ಯಾಪಿಯೆಸ್ಟ್ ಮೈಂಡ್ಸ್), ದೀಪಾ ನಾಗರಾಜ್ (ಎಂಫಸಿಸ್), ಅಂಜಿ ಮೊಹಮದ್ (ಸ್ಯಾಪ್), ಸುಭಾಷಿಣಿ ಶ್ರೀರಾಮ್ (ಕೆರ್ಲಾನ್), ಪರಮಿಂದರ್ ಕಕಾರಿಯ (ವಿಪ್ರೊ), ಅತಿರೇಕ್ ಗೌತಮ್ (ಸದರ್‌ಲ್ಯಾಂಡ್), ರಾಘವೇಂದ್ರ (ಭಾಷ್), ಸುನಿಲ್ ದೇಶಪಾಂಡೆ (ಟಿಸಿಎಸ್), ಜಯಂತಿ ಸಂಪ್ರತಿ (ನೆಕ್ಷ್ಟ್ ವೆಲ್ತ್), ಅನುರಾಗ್ (ಸಿಸ್ಕೊ), ಅರ್ಜುನ್ ರಾಮರಾಜು (ಕನೆಕ್ಟ್ ಕ್ಯೂ), ವಿವೇಕ್ ಇರುದಯ್ರಾಜ್ (ಫಸ್ಟ್ ಸೋರ್ಸ್), ಸಂಜಯ್ ಬವ್ರಾಯ್ (ಅಕ್ಸೆಂಚರ್), ದೀಪಕ್ ತಿರುಮಲೈ (ಎಲ್‌ಟಿಐ ಮೈಂಡ್‌ಟ್ರಿ), ರಾಜೇಶ್ ಚಂದ್ರನ್ (ಹ್ಯಾಪಿಯೆಸ್ಟ್ ಮೈಂಡ್ಸ್), ತರುಣ್ ಶ್ರೀನಿವಾಸನ್ (ಜನ್‌ಪ್ಯಾಕ್ಟ್) ಹಾಗೂ ನ್ಯಾಸ್‌ಕಾಂ ಸಂಸ್ಥೆಯ ಕೆ.ಎಸ್.ವಿಶ್ವನಾಥನ್, ಭಾಸ್ಕರ್ ವರ್ಮ, ಸಂದೀಪ್ ಕುಲಕರ್ಣಿ ಮತ್ತು ದಿನೇಶ್ ಪಾಣಿಗ್ರಾಹಿ ಭಾಗವಹಿಸಿದ್ದರು. ಮಾಹಿತಿ ತಂತ್ರಜ್ಞಾನ ಇಲಾಖೆಯ ನಿರ್ದೇಶಕಿ ಶ್ರೀಮತಿ ಮೀನಾ ನಾಗರಾಜ್ ಸಭೆಯಲ್ಲಿ ಭಾಗವಹಿಸಿದ್ದರು.
ಐಪೋನ್ ಘಟಕ ಸ್ಥಾಪಿಸಲು ಭೂಮಿ ಹಸ್ತಾಂತರ: ವಿಶ್ವದ ಅತಿ ದೊಡ್ಡ ಎಲೆಕ್ಟ್ರಾನಿಕ್ ತಯಾರಿಕಾ ಕಂಪನಿ ಹಾನ್ ಹಾಯ್ ಟೆಕ್ನಾಲಜಿ ಗ್ರೂಪ್ (ಫಾಕ್ಸ್ಕಾನ್) ಕಂಪನಿಗೆ ಐಫೋನ್ ಅಸೆಂಬ್ಲಿ ಘಟಕವನ್ನು ಸ್ಥಾಪಿಸಲು ಜುಲೈ 1ರ ಹೊತ್ತಿಗೆ ಪೂರ್ತಿಯಾಗಿ ಭೂಮಿ ಹಸ್ತಾಂತರಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ. 2024ರ ಏಪ್ರಿಲ್ 1ರ ವೇಳೆಗೆ ಬೆಂಗಳೂರಿನ ದೇವನಹಳ್ಳಿ ಸ್ಥಾಪಿಸಲಿರುವ ಐಫೋನ್ ಅಸೆಂಬ್ಲಿ ಘಟಕದಲ್ಲಿ ಉತ್ಪಾದನೆ ಆರಂಭಿಸುವ ಗುರಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಭೂಮಿ ಹಸ್ತಾಂತರ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಆಸ್ಟ್ರೇಲಿಯನ್ ಕಾನ್ಸುಲೇಟ್ ಕಚೇರಿ ಶೀಘ್ರ ಪ್ರಾರಂಭ