ಬೆಂಗಳೂರು: ದೇಶ ಕೊರೊನಾ ಸಂಕಷ್ಟದಿಂದ ಈಗಷ್ಠೆ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಶಾದಾಯಕ ಬಜೆಟ್ ನೀಡಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಬಜೆಟ್ಗೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡಿದ ಸಚಿವರು, ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿದ್ದು ಸ್ವಾಗತಾರ್ಹ. ರೈತರು, ಪಶುಪಾಲಕರಿಗೆ ಉತ್ತೇಜನ ನೀಡಲು ರೂ.16.5ಲಕ್ಷ ಕೋಟಿ ಸಾಲ ಯೋಜನೆಗೆ ಉದ್ದೇಶಿಸಿದ್ದು ಸಂತಸ ತಂದಿದೆ. ಪಶುಸಂಗೋಪನೆ, ಡೈರಿ ಮತ್ತು ಮೀನುಗಾರಿಕೆಗೆ ಹೆಚ್ಚಿನ ಸಾಲ ಒದಗಿಸುವ ಅವಕಾಶ ಮಾಡಿದ್ದು ಪಶು ಪಾಲನೆ, ಡೈರಿ ಮತ್ತು ಜಾನುವಾರು ಸಾಕಣೆದಾರರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಪಶುಪಾಲನೆ, ಹೈನುಗಾರಿಕೆ, ಕುಕ್ಕುಟ ಉದ್ಯಮಕ್ಕೆ ರೂ.30 ಸಾವಿರ ಕೋಟಿ ಯಿಂದ ರೂ.40 ಸಾವಿರ ಕೋಟಿಗೆ ಹೆಚ್ಚಳ ಮಾಡಿದ್ದು ಈ ಉದ್ಯಮವನ್ನು ಅವಲಂಬಿಸಿರುವವರಲ್ಲಿ ಆಶಾ ಭಾವನೆ ಮೂಡಿಸಿದಂತಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ದೇಶವನ್ನು ಸಂಕಷ್ಟದಿಂದ ಪಾರು ಮಾಡಲಿದೆ ಎಂದು ಹೇಳಿದ್ದಾರೆ.