ಬೆಂಗಳೂರು : ರಾಜ್ಯದಲ್ಲಿ ಗೋಶಾಲೆಗಳ ನಿರ್ವಹಣೆ ಸರಿಯಾಗಿ ಆಗುತ್ತಿದೆ, ಯಾವುದೇ ಲೋಪಗಳಾಗಿಲ್ಲ. ಮೇವು ಖರೀದಿ ಹೊಣೆ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ, ಸರ್ಕಾರವೂ ನಿಗಾ ಇಟ್ಟಿದೆ. ರಾಜ್ಯದಲ್ಲಿ 25 ಗೋಶಾಲೆಗಳ ನಿರ್ಮಾಣ ಆಗಿದೆ. ಉಳಿದ 5 ಜಿಲ್ಲೆಗಳಲ್ಲಿ ನಿರ್ಮಾಣ ಹಂತದಲ್ಲಿದೆ. ನಾನೂ ಸೇರಿದಂತೆ ಹಲವು ರಾಜಕಾರಣಿಗಳು ಗೋವುಗಳನ್ನು ದತ್ತು ಪಡೆದಿದ್ದೇವೆ. ಗೋಶಾಲೆಗಳಿಗೆ ಗೋವುಗಳ ಪೋಷಣೆಗೆ ನಾವು ಹಣ ಸಂದಾಯ ಮಾಡುತ್ತಿದ್ದೇವೆ ಎಂದು ಪಶಸಂಗೋಪನಾ ಸಚಿವ ಪ್ರಭುಚವ್ಹಾಣ್ ಹೇಳಿದ್ದಾರೆ.
ನಾವು ಅಧಿಕಾರಕ್ಕೆ ಬಂದಲ್ಲಿ ಗೋಹತ್ಯೆ ತಡೆ ಕಾಯ್ದೆ ರದ್ದುಪಡಿಸುವುದಾಗಿ ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್‌ನವರು ಕಾಯ್ದೆ ರದ್ದು ಮಾಡಿದರೆ ರಾಜ್ಯದ ಜನ ಸುಮ್ಮನಿರಲ್ಲ. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರೋದೇ ಇಲ್ಲ. ಇನ್ನು ಕಾಯ್ದೆ ರದ್ದು ಹೇಗೆ ಸಾಧ್ಯ? ಎಂದರು. ನಾವು ಕಾಯ್ದೆ ಜಾರಿ ಮಾಡಿದ ಬಳಿಕ ಹತ್ತು ಸಾವಿರಕ್ಕಿಂತ ಹೆಚ್ಚು ಹಸುಗಳ ರಕ್ಷಣೆ ಆಗಿದೆ. 3 ಸಾವಿರಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಚರ್ಮಗಂಟು ರೋಗ ನಿಯಂತ್ರಣಕ್ಕೆ ಕ್ರಮ: ಇತ್ತೀಚೆಗೆ ರಾಜ್ಯದಲ್ಲಿ ಚರ್ಮಗಂಟು ರೋಗದ ಬಗ್ಗೆ ಚರ್ಚೆ ಆಗುತ್ತಿತ್ತು. ಈ ರೋಗ ಆಗಸ್ಟ್ ನಲ್ಲಿ ಬಂದಿದ್ದು ರೋಗ ನಿವಾರಣೆ ಮಾಡಲು ಲಸಿಕೆ ಕೊಡಲಾಗಿದೆ. ದೇಶದ 13 ಕಡೆಗಳಲ್ಲಿ ಈ ರೋಗ ಇದೆ. ಕರ್ನಾಟಕದಲ್ಲಿ ಇದಕ್ಕೆ ನಾವು ಲಸಿಕೆ ಕೊಟ್ಟೆವು. ಜೊತೆಗೆ 10 ಸಾವಿರ ರೂ. ಪರಿಹಾರ ಕೊಟ್ಟಿದ್ದೇವೆ. ಇದಕ್ಕಾಗಿ ಸುಮಾರು 55 ಕೋಟಿ ರೂಪಾಯಿಗಳು ಖರ್ಚು ಮಾಡಲಾಗಿದೆ. ನಮ್ಮನ್ನು ನೋಡಿ ಮಹಾರಾಷ್ಟ್ರದವರು ಈಗ ಲಸಿಕೆ ಕೊಡುತ್ತಿದ್ದಾರೆ. ಈಗ ಚರ್ಮ ರೋಗ ನಿಯಂತ್ರಣದಲ್ಲಿದೆ. ರಾಜ್ಯದಲ್ಲಿ ಕಾಲುಬಾಯಿ ರೋಗ ಕೂಡ ನಿಯಂತ್ರಣ ಆಗಿದೆ ಎಂದು ಹೇಳಿದರು.
ರಾಜ್ಯದ 231 ಗೋಶಾಲೆಗಳಲ್ಲಿರುವ 30,098 ಜಾನುವಾರುಗಳ ಪೈಕಿ ಪುಣ್ಯಕೋಟಿ ಪೋರ್ಟಲ್ ನಲ್ಲಿ 192 ಗೋಶಾಲೆಗಳಲ್ಲಿನ 2719 ಗೋವುಗಳು ನೋಂದಣಿಯಾಗಿದೆ. ಈವರೆಗೂ 251 ಜನ 22,38,500 ರೂಪಾಯಿ ನೀಡಿ ಪುಣ್ಯಕೋಟಿ ದತ್ತು ಪಡೆದಿದ್ದಾರೆ. ಗೋಶಾಲೆಗಳಿಗೆ 2113 ಜನ 4,71,354 ರೂ. ದೇಣಿಗೆ ನೀಡಿದ್ದಾರೆ. ಹಸುಗಳ ಆಹಾರಕ್ಕಾಗಿ 433 ಜನ 1,47,354 ರೂ. ಹಣ ನೀಡಿದ್ದಾರೆ. 194 ಜನ ಗೋವುಗಳ ಮೇವು ನಿಧಿಗಾಗಿ 1,07,750 ರೂ. ಹಣ ನೀಡಿದ್ದಾರೆ. ಒಟ್ಟು 26,57,144 ರೂ.ಗಳನ್ನು ಗೋಮಾತಾ ಸೇವೆಗೆ ನೀಡಿದ್ದಾರೆ ಎಂದು ತಿಳಿಸಿದರು.
ಸರಕಾರದಿಂದ ಗೋ ತಳಿಗಳ ಸಂರಕ್ಷಣೆ : ಗೋ ತಳಿಗಳನ್ನು ಸಂರಕ್ಷಿಸಲು ಮತ್ತು ಅವುಗಳ ಸಂತತಿಯನ್ನು ಹೆಚ್ಚಿಸಲು ಕೆಎಂಎಫ್ ಮೂಲಕ 2000 ಗೋ ತಳಿಗಳನ್ನು ರೈತರಿಗೆ ಹಂಚಿಕೆ ಮಾಡಲಾಗಿದೆ. ರಾಜ್ಯದ ಗೋಶಾಲೆಗಳಲ್ಲಿನ ತ್ಯಾಜ್ಯಗಳನ್ನು ಪರಿಸರ ಸ್ನೇಹಿ ಉತ್ಪನ್ನಗಳಿಗಾಗಿ ಅರ್ಥಿಕ ನೆರವನ್ನು ನೀಡಲಾಗಿದೆ. ಗೋ ಉತ್ಪನ್ನಗಳ ಮಾರಾಟಕ್ಕಾಗಿ ಗೋ ಮಾತಾ ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ. ಗೋ ಸಂಪತ್ತಿನ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿರುವ ನಮ್ಮ ಸರ್ಕಾರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ಯನ್ನು ಜಾರಿಗೆ ತರಲಾಗಿದೆ. ನೂತನ 100 ಪಶು ಚಿಕಿತ್ಸಾಲಯಗಳನ್ನು ಹಂತ ಹಂತವಾಗಿ ಪ್ರಾರಂಭ ಮಾಡಲಾಗುತ್ತಿದೆ ಎಂದು ಇಲಾಖೆಯಲ್ಲಿನ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಕ್ರಮ ವಹಿಸಲಾಗಿದೆ. ಆಕಸ್ಮಿಕ ಮರಣ ಹೊಂದುವ ಕುರಿ/ಮೇಕೆ ಸಾಕಾಣಿಕೆದಾರರು ಮತ್ತು ವಲಸೆ ಕುರಿಗಾರರ ಕುಟುಂಬಕ್ಕೆ 5 ಲಕ್ಷ ರೂಪಾಯಿ ವಿಮಾ ಸೌಲಭ್ಯ ನೀಡಲಾಗುತ್ತಿದೆ. ಪಿಂಜಾರಸೋಲ್ ಸಹಾಯಧನ ಯೋಜನೆ ಅಡಿಯಲ್ಲಿ ರಾಜ್ಯದಾದ್ಯಂತ ಇರುವ ಖಾಸಗಿ ಗೋಶಾಲೆಗಳಿಗೆ ಪ್ರಸಕ್ತ ಸಾಲಿನಲ್ಲಿ 377 ಲಕ್ಷ ಅನುದಾನ ನೀಡಲಾಗಿದೆ. 400 ಪಶು ವೈದ್ಯಾಧಿಕಾರಿಗಳನ್ನು ನೇಮಕಾತಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. 250 ಕಿರಿಯ ಪಶು ವೈದ್ಯಕೀಯ ಪರಿವೀಕ್ಷಕರ ಹುದ್ದೆಗಳನ್ನು ನೇಮಕ ಮಾಡಲು ಅಧಿಸೂಚನೆ ನೀಡಲಾಗಿದೆ ಎಂದರು.
ಇನ್ನು ಕರ್ನಾಟಕ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 217 ಬೋಧಕ ಹಾಗೂ 220 ಬೋಧಕೇತರ ಸಿಬ್ಬಂದಿ ಹುದ್ದೆಗಳನ್ನು ನೇಮಕಾತಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಲವು ವರ್ಷಗಳಿಂದ ಖಾಲಿ ಉಳಿದ 36 ಬ್ಯಾಗ್ ಲಾಕ್ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಈಗಾಗಲೇ 47 ಪಶು ವೈದ್ಯಾಧಿಕಾರಿಗಳ ನೇಮಕಾತಿ ಮಾಡಿ ಆದೇಶ ಹೊರಡಿಸಲಾಗಿದೆ. 83 ಪಶು ವೈದ್ಯಕೀಯ ಸಹಾಯಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ರತಿ ಲೀಟರ್ ಹಾಲಿಗೆ 5 ರೂ.ರಂತೆ 10 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ವಿತರಿಸಲಾಗಿದೆ. ಒಟ್ಟು 1250 ಕೋಟಿ ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಕಾಲು ಬಾಯಿ ರೋಗ ನಿಯಂತ್ರಣಕ್ಕಾಗಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ವರ್ಷಕ್ಕೆ 2 ಬಾರಿಯಂತೆ 1.14 ಕೋಟಿ ಜಾನುವಾರುಗಳಿಗೆ ಪಲ್ಸ್ ಪೊಲೀಯೋ ಮಾದರಿಯಲ್ಲಿ ಲಸಿಕೆ ನೀಡಲಾಗುತ್ತಿದೆ ಎಂದು ಸಮಗ್ರ ಮಾಹಿತಿ ನೀಡಿದರು.
ಚರ್ಮಗಂಟು ರೋಗ ಹಿನ್ನೆಲೆ ರಾಜ್ಯದಲ್ಲಿ ಲಸಿಕಾಕರಣ ಪೂರ್ಣವಾಗಿದೆ ರಾಜ್ಯದಲ್ಲಿ ಚರ್ಮ ಗಂಟು ರೋಗ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಕಾಲುಬಾಯಿ ರೋಗಕ್ಕೂ ನಿತ್ಯ ಎರಡು ಸಲ ಲಸಿಕೆ ಹಾಕಬೇಕಿತ್ತು ಕಾಲುಬಾಯಿ ರೋಗದ ಲಸಿಕಾಕರಣವೂ ಪೂರ್ಣವಾಗಿದೆ ಗೋಹತ್ಯೆ ನಿಷೇಧ ಕಾನೂನು ಐತಿಹಾಸಿಕ ಕಾನೂನು ನಮ್ಮ ಸರ್ಕಾರ ಗಟ್ಟಿ ನಿರ್ಧಾರ ಮಾಡಿ ಕಾಯ್ದೆ ಜಾರಿ ಮಾಡಿದ್ದೇವೆ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಮಾಡಿದ್ದೇವೆ ಶಿಕ್ಷೆ ಪ್ರಮಾಣ, ದಂಡ ಹೆಚ್ಚಿಸಿದ್ದೇವೆ ಗೋಸಂಪತ್ತು ರಕ್ಷಣೆಗೆ ಕಾಂಗ್ರೆಸ್ ಕೊಡುಗೆ ಏನೂ ಇಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ :ಮಾ.4ರಿಂದ 20ರವರೆಗೆ ಯೋಜನೆಗಳ ಫಲಾನುಭವಿಗಳ ಸಮಾವೇಶ: ಸಚಿವ ಆಚಾರ್