ಬೆಂಗಳೂರು: ಅ. 16 ರಂದು ಮಹಾಕುಂಭಮೇಳ ಸಮಾರೋಪ ಸಮಾರಂಭವನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಲಿದ್ಧಾರೆ ಎಂದು ಸಚಿವ ನಾರಾಯಣಗೌಡ ತಿಳಿಸಿದರು.
ವಿಧಾನಸೌಧದಲ್ಲಿ ಸಚಿವರಾದ ನಾರಾಯಣ ಗೌಡ ಮತ್ತು ಕೆ. ಗೋಪಾಲಯ್ಯ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 13 ರಿಂದ 16 ರವರೆಗೆ ಕೆ. ಆರ್ ಪೇಟೆ ತಾಲೂಕಿನ ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಯಲಿದೆ. ಕುಂಭಮೇಳದಲ್ಲಿ ಮಲೆ ಮಹದೇಶ್ವರ ಜಯಂತಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಂಡ್ಯ ಜಿಲ್ಲಾ ಉತ್ಸವ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಅ. 13 ರಂದು ತ್ರಿವೇಣಿ ಸಂಗಮದಲ್ಲಿ ಸೇರಲಿರುವ ಮಲೆ ಮಹದೇಶ್ವರ ಬೆಟ್ಟದಿಂದ 3 ಜ್ಯೋತಿಗಳಿಗೆ ಹೊರಟಿದೆ. ಅ. 13 ರಂದು ಮಧ್ಯಾಹ್ನ 3 ಗಂಟೆಗೆ ಕೆ. ಆರ್ ಪೇಟೆಯಲ್ಲಿ ಜಿಲ್ಲಾ ಉತ್ಸವದ ಮೆರವಣಿಗೆಗೆ ಚಾಲನೆ ನೀಡಲಾಗುವುದು. 6 ಗಂಟೆಗೆ ಜಿಲ್ಲಾ ಉತ್ಸವ ಉದ್ಘಾಟನೆಯಾಗಲಿದೆ ಎಂದರು.
ಅ. 14 ರಂದು ಬೆಳಗ್ಗೆ 11 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರಿಂದ ಕುಂಭ ಮೇಳ ಕಾರ್ಯಕ್ರಮ ಉದ್ಘಾಟನೆ ಆಗಲಿದೆ. ಅ. 15 ರಂದು ಬೆಳಗ್ಗೆ 11 ಗಂಟೆಗೆ ಕುಂಭ ಮೇಳದ ಧಾರ್ಮಿಕ ಸಭೆ ಉದ್ಘಾಟನೆಯಾಗಲಿದೆ ಎಂದು ವಿವರಿಸಿದರು.
ಸಮಾರೋಪದಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಭಾಗಿಯಾಗಲಿದ್ದಾರೆ. ಅ. 16 ರಂದು ಬೆಳಗ್ಗೆ 9.30ಕ್ಕೆ ಮಹಾಕುಂಭ ಮೇಳದ ಪುಣ್ಯ ಸ್ನಾನ ನಡೆಯಲಿದೆ. ಕುಂಭ ಮೇಳದಲ್ಲಿ 300ಕ್ಕೂ ಹೆಚ್ಚು ಧಾರ್ಮಿಕ ಗುರುಗಳು, 3 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಭಾಗಿಯಾಗಲಿದ್ದಾರೆ. ನಿರ್ಮಲಾನಂಧನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ ಸೇರಿದಂತೆ 30ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ ಎಂದರು.
ನಿರಂತರ ಊಟದ ವ್ಯವಸ್ಥೆ: ಪ್ರತಿದಿನ 2 ಲಕ್ಷದಂತೆ ಒಟ್ಟು 6 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸ್ವಾಮೀಜಿಗಳು, ಸಾಧು ಸಂತರು, ಅತಿಗಣ್ಯ ವ್ಯಕ್ತಿಗಳು ಹಾಗೂ ಭಕ್ತರಿಗೆ ಪ್ರತ್ಯೇಕ ಸ್ನಾನ ಘಟ್ಟದ ವ್ಯವಸ್ಥೆ ಮಾಡಲಾಗಿದೆ. ಜನರಿಗೆ 4 ದಿನಗಳ ಕಾಲ ನಿರಂತರ ಊಟದ ವ್ಯವಸ್ಥೆ ಇರಲಿದೆ. 200ಕ್ಕೂ ಹೆಚ್ಚು ಬಯೋ ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ. ಯಾತ್ರಾರ್ಥಿಗಳಿಗೆ ಉಚಿತ ವೈಫೈ ವ್ಯವಸ್ಥೆ ಇರಲಿದೆ.
2 ಕೋಟಿ ರೂ ಅನುದಾನ ಬಿಡುಗಡೆ: 200 ಸಾಧುಗಳ ವಾಸ್ತವ್ಯಕ್ಕೆ ಟೆಂಟ್ ನಿರ್ಮಾಣ ಮಾಡಲಾಗುವುದು. ಭದ್ರತೆಗಾಗಿ 2000 ಕ್ಕೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಸಂಗಮದಲ್ಲಿ ನುರಿತ ಈಜುಗಾರರು, ಮುಳುಗು ತಜ್ಞರನ್ನು ನಿಯೋಜಿಸಲಾಗುವುದು. ಮಹಾಕುಂಭಮೇಳಕ್ಕೆ ರಾಜ್ಯ ಸರ್ಕಾರದಿಂದ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಓದಿ: ರಾಜ್ಯದಲ್ಲಿ ಆ್ಯಂಬುಲೆನ್ಸ್ ಸಮಸ್ಯೆ: ಮುಂದುವರಿದ ರಾಷ್ಟ್ರಗಳಂತೆ ಸೇವೆ ನೀಡಲು ಪ್ರಯತ್ನ; ಸಚಿವ ಸುಧಾಕರ್