ಬೆಂಗಳೂರು: ಹಾದಿ ಬೀದಿಯಲ್ಲಿ ಮಾತನಾಡುವವರಿಗೆ ನಾನು ಉತ್ತರ ಕೊಡಲ್ಲ ಎಂದು ಸಚಿವ ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್ಗೆ ತಿರುಗೇಟು ನೀಡಿದರು. ವಿಕಾಸೌಧದಲ್ಲಿ ಮಾತನಾಡಿದ ಅವರು, ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಸಮಾಜದ ಬಗ್ಗೆ ಮಾತನಾಡಲ್ಲ. ವೀರಶೈವ ಲಿಂಗಾಯತ ಸಮಾಜ ಪ್ರಜ್ಞಾವಂತ ಸಮಾಜ ಇದೆ ಎಂದರು.
ಪಂಚಮಸಾಲಿ ಹೋರಾಟವನ್ನು ಯಾರು ದುರ್ಬಳಕೆ ಮಾಡಿದ್ದಾರೆ ಎಂಬುದು ಚುನಾವಣೆಯಲ್ಲಿ ನಿರ್ಧಾರ ಆಗಲಿದೆ. ಪಂಚಮಸಾಲಿ ಹೋರಾಟ ಮಾತ್ರವಲ್ಲ, ಇಡೀ ವೀರಶೈವ ಲಿಂಗಾಯತ ಹೋರಾಟದ ಬಗ್ಗೆ ನಾವು ಹೋರಾಟ ಮಾಡಬೇಕಾಗುತ್ತದೆ. ಕೇವಲ ಪಂಚಮಸಾಲಿ ಮಾತ್ರವಲ್ಲ, ಇಡೀ ವೀರಶೈವ ಲಿಂಗಾಯತ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿದ್ದಾರೆ. ಇಡೀ ಸಮುದಾಯದಲ್ಲಿ ಸಣ್ಣ ಸಣ್ಣ ಜಾತಿಗಳಿವೆ. ಅವುಗಳೆಲ್ಲದರ ಬಗ್ಗೆಯೂ ನಾವು ಅಧಿಕಾರದಲ್ಲಿ ಇರುವವರು ಗಮನ ಹರಿಸಬೇಕು ಎಂದರು.
ನಾವು ಸರ್ಕಾರದಲ್ಲಿ ಇರುವವರು. ಕೇವಲ ಒಂದು ಸಮುದಾಯಕ್ಕೆ ಮಾತ್ರ ಹೋರಾಟ ಮಾಡಿದರೆ ಸಾಕಾಗಲ್ಲ. ಮುಂದೆ ಅಗತ್ಯ ಬಿದ್ದರೆ ಪಂಚಮಸಾಲಿ ಹೋರಾಟಕ್ಕೆ ಜೊತೆಗೂಡುತ್ತೇನೆ. ಈಗ ಯಾರೋ ಮಾತನಾಡಿದರೂ ಅಂತ ಉತ್ತರ ಕೊಡೋದಕ್ಕೆ ಹೋಗಲ್ಲ ಎಂದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿಯ ಬಗ್ಗೆ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಷ್ಟ್ರೀಯ ನಾಯಕರು ಬಂದಾಗ ಅವರದ್ದೇ ಅದ ರೀತಿಯಲ್ಲಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಶಿಸ್ತು ಉಲ್ಲಂಘನೆ ವಿಚಾರವಾಗಿ ಅವರು ಆ ಸಂದರ್ಭದಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ನಾಯಕತ್ವ ಬದಲಾವಣೆ ಬಗ್ಗೆ ಉತ್ತರಿಸುತ್ತಾ, ಹೈಕಮಾಂಡ್ ಏನೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾವು ಬದ್ಧ. ನನಗೆ ಇರುವ ಮಾಹಿತಿ ಪ್ರಕಾರ ಯಡಿಯೂರಪ್ಪ ಇನ್ನೂ ಎರಡು ವರ್ಷ ಸಿಎಂ ಆಗಿ ಇರುತ್ತಾರೆ. ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.