ಬೆಂಗಳೂರು: 'ಉದ್ಯೋಗ ನೀಡು ಉದ್ಯಮಿಯಾಗು' ಎಂಬ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಫೆಬ್ರವರಿ 27 ರಂದು ಮಾಡಲಾಗುವುದು. ಅದರಲ್ಲಿ 5,000 ಪದವೀಧರರು ಪಾಲ್ಗೊಳ್ಳಲಿದ್ದಾರೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಮಲ್ಲೇಶ್ವರಂದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಕೈಗಾರಿಕೆ ಇಲಾಖೆ ವಹಿಸಿಕೊಂಡ ನಂತರ ರಾಜ್ಯಕ್ಕೆ ಅತಿ ಹೆಚ್ಚು ಬಂಡವಾಳ ಹರಿದು ಬಂದು ನಂಬರ್ ಒನ್ ರಾಜ್ಯವಾಗಿದೆ ಎಂದರು.
ನವೆಂಬರ್ ಒಳಗಾಗಿ 50 ಸಾವಿರ ಎಕರೆ ಭೂಮಿ ವಶಪಡಿಸಲಾಗುತ್ತಿದೆ. ಜಮೀನು ಪಡೆದವರು ಉದ್ಯಮ ಸ್ಥಾಪನೆ ಮಾಡದೇ ಇರುವವರ ಜಮೀನು ವಾಪಸ್ ಪಡೆಯಲಾಗುತ್ತಿದೆ. ಸುಮಾರು 1000 ಎಕರೆ ವಾಪಸ್ ಪಡೆಯಲಾಗುತ್ತಿದೆ. ಏಕಾಏಕಿ ವಶಪಡಿಸಿಕೊಳ್ಳಲು ಮುಂದಾದರೆ ಕೋರ್ಟ್ ಮೆಟ್ಟಿಲು ಹತ್ತುತ್ತಾರೆ ಎಂದು ಹೇಳಿದರು.
ನವೆಂಬರ್ನಲ್ಲಿ ಸಮಾವೇಶ : ನವೆಂಬರ್ 2,3,4 ರಂದು ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲು ಈಗಾಗಲೇ ತೀರ್ಮಾನ ಮಾಡಲಾಗಿದೆ. 2010 ರಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದಾಗ 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದ ಮಾಡಲಾಗಿತ್ತು. ಈ ಬಾರಿ ಹೂಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಲಾಗುತ್ತದೆ ಎಂದು ತಿಳಿಸಿದರು.
ಎಸ್ಸಿ, ಎಸ್ಟಿಯವರಿಗೆ ಶೇ. 75 ರಷ್ಟು ಸಬ್ಸಿಡಿ ಕೊಡಲಾಗುತ್ತಿದೆ. ಆರ್ಥಿಕ ದುರ್ಬಲವಾಗಿರುವವರಿಗೆ 2 ಎಕರೆ ಜಮೀನು ಶೇ. 75 ರಿಯಾಯಿತಿ ದರದಲ್ಲಿ ಜಮೀನು ನೀಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಪಂಚಮಸಾಲಿ ಮೂರನೇ ಪೀಠ ಸ್ಥಾಪನೆಗೆ ನಾನು ಅತಿಥಿಯಾಗಿ ಹೋಗುತ್ತೇನೆ. ವಚನಾನಂದ ಸ್ವಾಮೀಜಿ ಮುಂದೆ ನಿಂತು ಪೀಠ ಮಾಡುತ್ತಿದ್ದಾರೆ. ಹರಿಹರ ಪೀಠ ಇದ್ದರೂ ಕೂಡಲ ಸಂಗಮ ಪೀಠ ನಾವೇ ಸ್ಥಾಪನೆ ಮಾಡಿದ್ದೇವೆ. ನಮ್ಮ ಹಿಂದು ಧರ್ಮದಲ್ಲಿ ಸ್ವಾಮೀಜಿಗಳಿಗೆ ಉನ್ನತ ಸ್ಥಾನ ಇದೆ.
ನಾವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಸ್ವಾಮೀಜಿಗೆ ಗೌರವಿಸುತ್ತೇವೆ. ಯಾವುದೇ ಪೀಠ ರಾಜಕಾರಣಿಗಳ ಲಾಭಕ್ಕೆ ಹುಟ್ಟಿಕೊಂಡಿದೆ ಅನ್ನುವುದನ್ನು ನಾನು ಒಪ್ಪುವುದಿಲ್ಲ. ಇನ್ನಷ್ಟು ಪೀಠಗಳು ಹುಟ್ಡಿಕೊಂಡರೂ ಯಾವುದೇ ಸಮಸ್ಯೆ ಇಲ್ಲ. ನಾನು ತನು ಮನ ಧನದಿಂದ ಸಹಾಯ ಮಾಡುತ್ತೇನೆ ಎಂದರು.
ಇದನ್ನೂ ಓದಿ : ಶಾಲಾ- ಕಾಲೇಜು ಪುನಾರಂಭದ ಬಗ್ಗೆ ಸಿಎಂ ನೇತೃತ್ವದಲ್ಲಿ ಸಭೆ: ಸಚಿವ ನಾಗೇಶ್