ಬೆಂಗಳೂರು : ಪೌರಾಡಳಿತ ಮತ್ತು ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಅವರು ಕೊನೆಗೂ ಹಿಡಿದ ಛಲವನ್ನು ಸಾಧಿಸಿಕೊಂಡರೇ!?. ಹೀಗೊಂದು ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಬಿಜೆಪಿ ಸರ್ಕಾರ ರಚನೆಗೆ ಎಂಟಿಬಿ ನಾಗರಾಜ್ ಅವರ ಕೊಡುಗೆಯೂ ಇತ್ತು. ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಎಂಟಿಬಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾಗಬೇಕೆಂದಿದ್ದ ನಾಗರಾಜ್ ಅವರಿಗೆ ಗೆಲುವು ಸಾಧ್ಯವಾಗಲಿಲ್ಲ.
ಇದರಿಂದ ಕಂಗಾಲಾದ ಎಂಟಿಬಿ ನಾಗರಾಜ್, ಸಿಎಂ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದು ವಿಧಾನಪರಿಷತ್ ಸದಸ್ಯರಾಗಿ ಸಚಿವ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಅವರಿಗೆ ಅಬಕಾರಿ ಖಾತೆಯನ್ನು ನೀಡಲಾಗಿತ್ತು. ಈ ಇಲಾಖೆಯಲ್ಲಿ ಹೆಚ್ವು ಕೆಲಸವಿಲ್ಲ. ಹಾಗಾಗಿ, ಕೆಲಸ ಮಾಡುವ ಖಾತೆ ನೀಡಬೇಕೆಂದು ಪಟ್ಟುಹಿಡಿದರು. ನಂತರ ಸಚಿವ ಶಿವರಾಮ್ ಹೆಬ್ಬಾರ್ ಬಳಿ ಇದ್ದ ಸಕ್ಕರೆ ಹಾಗೂ ನಾರಾಯಣಗೌಡ ಅವರ ಬಳಿಯಿದ್ದ ಪೌರಾಡಳಿತ ಇಲಾಖೆಯನ್ನು ಎಂಟಿಬಿ ನಾಗರಾಜ್ ಅವರಿಗೆ ನೀಡಲಾಯಿತು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರಾಗಿದ್ದ ಕೆ.ಗೋಪಾಲಯ್ಯ ಅವರಿಗೆ ಅಬಕಾರಿ ಖಾತೆ ನೀಡಿ ಸಮಾಧಾನಪಡಿಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದ ಎಂಟಿಬಿಗೆ ನಿರಾಸೆಯಾಯಿತು. ಅದಾಗಲೇ, ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ವಹಿಸಲಾಗಿತ್ತು. ಹಾಗಾಗಿ, ಬೇರೆ ಜಿಲ್ಲೆ ಕೊಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಅಷ್ಟರಲ್ಲೇ ರಮೇಶ್ ಜಾರಕಿಹೊಳಿ ಪ್ರಕರಣದ ಸುದ್ದಿ ದೊಡ್ಡದಾಗಿತ್ತು. ಹಾಗಾಗಿ, ರಾಜಕೀಯ ಚಟುವಟಿಕೆ ಕೆಲವು ದಿನ ಸ್ಥಗಿತಗೊಂಡಿತು. ಬಳಿಕ ಎಂಟಿಬಿ ನಾಗರಾಜ್ ಅವರಿಗೆ ಕೋಲಾರ ಜಿಲ್ಲಾ ಉಸ್ತುವಾರಿಯಾಗಿ ನೇಮಕ ಮಾಡಲಾಗಿತ್ತು. ಆದರೆ, ಅದನ್ನು ತೆಗೆದುಕೊಳ್ಳಲು ಎಂಟಿಬಿ ನಿರಾಕರಿಸಿದರು. ನಂತರ ಸಿಎಂ ವಿರುದ್ಧ ಮುನಿಸಿಕೊಂಡಿದ್ದರು.
ಈ ಮಧ್ಯೆ ಕೋಲಾರ ಜಿಲ್ಲೆಗೆ ಉಸ್ತುವಾರಿಯಾಗಿ ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರನ್ನು ನೇಮಿಸಲಾಯಿತು. ಕೊರೊನಾ ಎರಡನೇ ಅಲೆಯಿಂದಾಗಿ ಸರ್ಕಾರಕ್ಕೆ ಭಾರಿ ಸಂಕಷ್ಟ ಎದುರಾಯಿತು. ಜೊತೆಗೆ ನಾಯಕತ್ವ ಬದಲಾವಣೆ ಕೂಗು ಎದ್ದಿತ್ತು. ಎಂಟಿಬಿ ನಾಗರಾಜ್ ಮಾತ್ರ ಸಿಎಂ ವಿರುದ್ಧ ಮುನಿಸಿಕೊಂಡು ಸರ್ಕಾರದಿಂದ ಅಂತರ ಕಾಯ್ದುಕೊಂಡಿದ್ದರು. ಪರೋಕ್ಷವಾಗಿ ಸಿಎಂ ವಿರುದ್ಧ ಮಾತನಾಡಿದ್ದು ಉಂಟು.
ಇದೀಗ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ನಾಯಕತ್ವ ಗಟ್ಟಿಯಾಗುತ್ತಿದ್ದಂತೆ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಎಂಟಿಬಿ ನಾಗರಾಜ್ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸ್ಥಾನ ಸಿಕ್ಕಿದೆ. ಸರ್ಕಾರ ರಚನೆಯಲ್ಲಿ ಬೆಂಬಲ ನೀಡಿದ ಎಂಟಿಬಿ ನಾಗರಾಜ್ ಅವರ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ.