ಬೆಂಗಳೂರು: ನಮ್ಮ ಸರ್ಕಾರದಲ್ಲಿ ಯಾವುದೇ ಹಣ ಪಡೆದು ಪೋಸ್ಟಿಂಗ್ ನೀಡಿಲ್ಲ. ಉಚಿತವಾಗಿಯೇ ಪೋಸ್ಟಿಂಗ್ ಮಾಡುತ್ತಿದ್ದೇವೆ. ಯಾರು ಯಾರಿಗೂ ಹಣ ಕೊಡಬೇಕಿಲ್ಲ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಹಾಗೂ ಗೃಹ ಸಚಿವರು ಯಾಕೆ ರಾಜೀನಾಮೆ ಕೊಡಬೇಕು?. ರಾಜೀನಾಮೆ ಕೊಡುವ ಕೆಲಸ ನಾವೇನೂ ಮಾಡಿಲ್ಲ. ಹಣ ಕೊಟ್ಟಿರುವುದು, ತೆಗೆದುಕೊಂಡಿರುವ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾಕ್ಷಿ ಕೊಡಲಿ ಎಂದರು.
'ಇನ್ಸ್ಪೆಕ್ಟರ್ ನಂದೀಶ್ ಅವರನ್ನು ನಾನು ಭೇಟಿ ಮಾಡಿರಲಿಲ್ಲ. ಮೊನ್ನೆ ಹೃದಯಾಘಾತದಿಂದ ನಿಧನರಾದಾಗ ಆಸ್ಪತ್ರೆಗೆ ಹೋಗಿದ್ದೆ. ಅವರು ಹೆಚ್.ವಿಶ್ವನಾಥ್ ಅವರ ಸಂಬಂಧಿಕರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗುತ್ತಿದ್ದಾಗ, ಏನಾಯಿತು ಎಂದು ಕೆಲವರನ್ನು ಕೇಳಿದೆ. ಅದಕ್ಕೆ ಅವರು 70-80 ಲಕ್ಷ ಹಣ ಕೊಟ್ಟು ಬಂದಿರುವುದಾಗಿ ಹೇಳಿದರು. ಅದಕ್ಕೆ ನಾನು 70-80 ಲಕ್ಷ ಕೊಟ್ಟು ಬಾಯಿ ಬಡ್ಕೊಳೋಕೆ ಯಾಕೆ ಬಂದ ಎಂದು ಕೇಳಿದೆ. ಅದನ್ನು ಬಿಟ್ಟು ನಾನು ಬೇರೆ ಏನೂ ಹೇಳಿಲ್ಲ' ಎಂದು ಸ್ಪಷ್ಟನೆ ಕೊಟ್ಟರು.
ಪತ್ರಕರ್ತರ ಪ್ರಶ್ನೆಗೆ ವಿಚಲಿತರಾದ ಸಚಿವರು..: ಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು ಅಂತಾ ಹೇಳ್ತಿದ್ದೀರಾ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ಸಚಿವರು ಮುಂದಾದರು. ಆಗ ನೀವು ಮಾತನಾಡಿರುವ ವಿಡಿಯೋ ಸುಳ್ಳಾ?. ಹಾಗಾದರೆ ನೀವು ಮಾತನಾಡಿರುವ ವಿಡಿಯೋ ಬಹಿರಂಗಪಡಿಸಿ ಎಂದು ಮಾಧ್ಯಮದವರು ಮರು ಪ್ರಶ್ನೆ ಮಾಡಿದರು. ಆಗ ತಡಬಡಾಯಿಸಿದ ಸಚಿವರು, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೆ ಹೊರಟರು.
ಇದನ್ನೂ ಓದಿ: ಕೆಆರ್ ಪುರ ಇನ್ಸ್ಪೆಕ್ಟರ್ ಸಾವು: ಪೊಲೀಸ್ ಆಯುಕ್ತರ ವಿರುದ್ಧ ಸಚಿವ ಎಂಟಿಬಿ ಗರಂ