ಬೆಂಗಳೂರು : ಪರಿಷತ್ ಗಲಾಟೆ ವಿಚಾರದಲ್ಲಿ ನಾವು ಯಾವುದೇ ತಂತ್ರಗಾರಿಕೆ ಮಾಡಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಹಾಲಿ ಸಭಾಪತಿಗಳು ಕಾನೂನುನಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ. ಸಭಾಪತಿಗಳ ಮೇಲೆ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದಾಗ ಕೂಡಲೇ ಅದನ್ನ ಸಭೆಯ ಗಮನಕ್ಕೆ ತರಬೇಕಿತ್ತು ಎಂದಿದ್ದಾರೆ.
ಆದರೆ, ಸಭಾಪತಿಗಳು ಏಕಾಏಕಿಯಾಗಿ ಅದನ್ನ ತಿರಸ್ಕಾರ ಮಾಡಿದ್ದರು. ಹಿಂದೆ ವಿ ಎಸ್ ಉಗ್ರಪ್ಪ ಅವರು ಸಭಾಪತಿಗಳ ಮೇಲೆ ಅವಿಶ್ವಾಸ ನಿರ್ಣಯ ತಂದಾಗ ಅದನ್ನ ಸಭಾಪತಿಗಳು ಸಭೆಯ ಗಮನಕ್ಕೆ ತಂದು ಚರ್ಚೆಯಾಗಿತ್ತು.
ಹಾಲಿ ಸಭಾಪತಿಗಳು ಬಿಎಸಿ ಸಭೆಯ ನಿರ್ಣಯವನ್ನು ಸದನಕ್ಕೆ ತಿಳಿಸಬೇಕಿತ್ತು. ಆದ್ರೆ, ಸಭಾಪತಿಗಳು ಅದನ್ನ ತಿಳಿಸದೆ ಏಕಾಏಕಿಯಾಗಿ ಕಲಾಪ ಮುಂದೆ ಹಾಕಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಳಿಕ ಮತ್ತೆ ಒಂದು ದಿನದ ಪರಿಷತ್ ಸಭೆ ಕರೆದಾಗ ನೀವು ಚೇರ್ನಲ್ಲಿ ಕೂರಬಾರದು ಅಂತಾ ನಾವು ಪತ್ರ ಬರೆದಿದ್ದೆವು. ಸದನ ಪ್ರಾರಂಭವಾದಾಗ ಕೋರಂ ಬೆಲ್ ಹಾಕಲಾಗಿತ್ತು. 15 ನಿಮಿಷ ಆದರೂ ಸಭಾಪತಿಗಳು ಪೀಠಕ್ಕೆ ಬರಲಿಲ್ಲ. ಅವರು ಬರಲ್ಲ ಎಂದು ನಾವು ಭಾವಿಸಿದೆವು.
ಹೀಗಾಗಿ ಉಪ ಸಭಾಪತಿಗಳು ಪೀಠದಲ್ಲಿ ಕುಳಿತರು. ಹಾಲಿ ಇರುವ ಸಭಾಪತಿಗಳಿಗೆ ಬಹುಮತ ಇಲ್ಲ. ಹೀಗಿದ್ದರೂ ಅವರು ಪೀಠವನ್ನು ಬಿಡುತ್ತಿಲ್ಲ. ಇದು ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಅಪಮಾನ ಎಂದರು.
ಸದನ ಸಮಿತಿಯನ್ನು ಸದನದ ಹೊರಗಡೆ ರಚನೆ ಮಾಡುವ ಹಾಗಿಲ್ಲ. ಸದನ ಸಮಿತಿಯನ್ನು ಸದನದಲ್ಲೇ ನಿರ್ಧರಿಸಬೇಕು. ಆದರೆ, ಸಭಾಪತಿ ಸದನದ ಹೊರಗಡೆ ಏಕಪಕ್ಷೀಯವಾಗಿ ಸದನ ಸಮಿತಿ ರಚನೆ ಮಾಡಿರುವುದು ಸಂವಿಧಾನ ಬಾಹಿರ. ಅದಕ್ಕೆ ಯಾವುದೇ ಮಾನ್ಯತೆ ಇಲ್ಲ. ತಮಗೆ ಬೇಕಾದವರನ್ನು ಸದನ ಸಮಿತಿ ಸದಸ್ಯರನ್ನಾಗಿ ಮಾಡಲು ಬರುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೆಡಿಪಿ ಸಭೆಯಲ್ಲಿ ಅಧಿಕಾರಿಗೆ ಕೆಟ್ಟ ಪದಗಳಲ್ಲಿ ತರಾಟೆ: ಸಚಿವ ಮಾಧುಸ್ವಾಮಿ ಸ್ಪಷ್ಟನೆ ಹೀಗಿದೆ..