ಬೆಂಗಳೂರು : 'ಕೆಎಸ್‌ಆರ್‌ಟಿಸಿ' ಹೆಸರು ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಪಾಲಾಗಿರುವ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದು, ತೀರ್ಪಿನಲ್ಲಿ ಏನಿದೆ ಎಂಬ ಅಂಶ ನಮಗೆ ಅಧಿಕೃತವಾಗಿ ಇನ್ನೂ ಬಂದಿಲ್ಲ. ಅದು ಲಭ್ಯವಾದ ನಂತರ ಕರ್ನಾಟಕ ರಾಜ್ಯದ ಮುಂದಿನ ನಿಲುವು ಮತ್ತು ಕಾನೂನು ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ಪ್ರತಿಷ್ಠೆಗಿಂತ ಸೇವೆ ಮುಖ್ಯ:
ನಮ್ಮದು ಒಕ್ಕೂಟ ವ್ಯವಸ್ಥೆ, ಒಂದು ರಾಜ್ಯವು ಮತ್ತೊಂದು ರಾಜ್ಯದ ಜೊತೆಗೆ ಯಾವುದೇ ಸಂಘರ್ಷವಿಲ್ಲದೆ ಸೌಹಾರ್ದಯುತವಾಗಿ ಸಂಬಂಧ ಇಟ್ಟುಕೊಂಡು ಹೋಗಬೇಕೆಂದು ಒಕ್ಕೂಟ ವ್ಯವಸ್ಥೆ ಹೇಳುತ್ತದೆ. ಆದರೆ, ದುರದೃಷ್ಟವಶಾತ್ ಈ ವಿವಾದ ಅನಗತ್ಯವಾಗಿ ಎದ್ದಿದೆ. ಖಾಸಗಿ ಸಂಸ್ಥೆಗಳಲ್ಲಾದರೆ ಈ ರೀತಿಯ ಹೆಸರು ಅಥವಾ ಟ್ರೇಡ್ ಮಾರ್ಕ್ಗಳಿಂದ ಅವರ ವ್ಯವಹಾರ ಮತ್ತು ಲಾಭಗಳ ಮೇಲೆ ಪ್ರಭಾವ ಬೀಳುತ್ತದೆ. ಆದರೆ, ಸರ್ಕಾರಿ ಸಂಸ್ಥೆಗಳು ಹಾಗಲ್ಲ. ಇಲ್ಲಿ ಜನರ ಸೇವೆಯೇ ಮುಖ್ಯ. ಕರ್ನಾಟಕವಾಗಲಿ, ಕೇರಳವಾಗಲಿ ಪರಸ್ಪರ ಸಾರಿಗೆ ಕ್ಷೇತ್ರದಲ್ಲಿ ಲಾಭ ಗಳಿಸುವ ಮೇಲಾಟಕ್ಕೆ ಅಥವಾ ಸ್ಪರ್ಧೆಗೆ ಮುಂದಾಗದೆ ಸಾರ್ವಜನಿಕರ ಹಿತಾಸಕ್ತಿ ಮತ್ತು ಸೇವೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿವೆ. ಹೀಗಾಗಿ ಈ ವಿಷಯವನ್ನು ಯಾವುದೇ ರಾಜ್ಯಗಳು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಳ್ಳಬಾರದು ಎಂದರು.
ನಾವು ಯಾವತ್ತೂ ಕೇರಳದೊಂದಿಗೆ ಪೈಪೋಟಿಗೆ ಇಳಿದಿಲ್ಲ:
ಇದು ಕೇರಳಕ್ಕೇನು ಸಂಭ್ರಮ ಪಡುವಂತಹ ವಿಚಾರವಲ್ಲ. ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ ಎಂಬ ಹೆಸರಿದ್ದರೆ, ಅದರಿಂದ ಕೇರಳ ರಾಜ್ಯದ ಕೆಎಸ್ಆರ್ಟಿಸಿಗೆ ಯಾವುದೇ ನಷ್ಟವಿಲ್ಲ. ಕರ್ನಾಟಕವು ಕೇರಳದ ಸಾರಿಗೆ ಸಂಸ್ಥೆಯೊಂದಿಗೆ ಯಾವತ್ತೂ ಪೈಪೋಟಿಗೆ ಇಳಿದ್ದಿದ್ದಿಲ್ಲ ಎಂಬುದನ್ನು ಕೇರಳ ಮೊದಲು ಅರ್ಥ ಮಾಡಿಕೊಳ್ಳಬೇಕು. ಇಂತಹ ವಿಷಯಗಳಲ್ಲಿ ಅನಗತ್ಯವಾಗಿ ವಿವಾದಗಳನ್ನು ಹೆಚ್ಚು ಮಾಡುತ್ತಾ ಪರಸ್ಪರ ರಾಜ್ಯಗಳಲ್ಲಿ ವಿವಾದಗಳನ್ನು ಬೆಳೆಸುವ ಪರಿಪಾಠಕ್ಕೆ ನಾವೆಲ್ಲರೂ ಅಂತ್ಯ ಹಾಡಬೇಕು. ದೇಶದ ಹಿತದೃಷ್ಟಿಯಿಂದ ರಾಜ್ಯ ರಾಜ್ಯಗಳ ನಡುವಿನ ಬಾಂಧವ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾದ ವಿಷಯ ಎಂದು ಸಚಿವ ಸವದಿ ಹೇಳಿದರು.
ಏನಿದು ವಿವಾದ? ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ಕೆಎಸ್‌ಆರ್‌ಟಿಸಿ ಎನ್ನುವ ಹೆಸರನ್ನು ಕಳೆದುಕೊಳ್ಳಲಿದೆ. ಕೆಎಸ್‌ಆರ್‌ಟಿಸಿ ಎಂಬ ಹೆಸರು ಕೇರಳ ಪಾಲಾಗಿದೆ. ಭಾರತ ಸರ್ಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಇಂತಹದೊಂದು ಆದೇಶ ಹೊರಡಿಸಿದೆ.
ಕೆಎಸ್‌ಆರ್‌ಟಿಸಿ ಹೆಸರು ಮತ್ತು ಎರಡು ಆನೆಯ ಸಂಕೇತ, ಆನ ವಂಡಿ ಹೆಸರಿನ ಕಾಪಿ ರೈಟ್ಅನ್ನು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮಂಜೂರು ಮಾಡಿದೆ. ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಮಂಜೂರು ಮಾಡಿರುವುದಾಗಿ ಕೇರಳ ಸರ್ಕಾರದ ಸಾರಿಗೆ ಇಲಾಖೆ ಬುಧವಾರ ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ಕೇರಳ ಮತ್ತು ಕರ್ನಾಟಕ ರಾಜ್ಯಗಳ ನಡುವೆ 'ಕೆಎಸ್‌ಆರ್‌ಟಿಸಿ' ಮೊನೊಗ್ರಾಮ್ (ಸಾಂಕೇತಿಕಾಕ್ಷರಗಳು) ಕುರಿತ ವಿವಾದ ಬಹಳ ಹಿಂದೆಯೇ ಹುಟ್ಟಿಕೊಂಡಿತ್ತು. ಆದರೆ, ಎರಡು ರಾಜ್ಯಗಳ ನಡುವಿನ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸಂಬಂಧಿಸಿದಂತೆ 'ಕೆಎಸ್‌ಆರ್‌ಟಿಸಿ' ಮೊನೊಗ್ರಾಮ್ ಬಳಸುವ ಬಗೆಗಿನ ಕಾನೂನು ವಿವಾದವೂ 2014ರಲ್ಲಿ ಎಲ್ಲರ ಗಮನಕ್ಕೆ ಬಂದಿತ್ತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯು ಕೇರಳ ಸಾರಿಗೆ ಇಲಾಖೆಗೆ ಪತ್ರ ಬರೆದು ಕೆಎಸ್‌ಆರ್‌ಟಿಸಿ ಮೊನೊಗ್ರಾಮ್ ಬಳಸದಂತೆ ಸೂಚಿಸಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೇರಳ ಸಾರಿಗೆ ಇಲಾಖೆ, 1953ರಿಂದಲೂ 'ಕೆಎಸ್‌ಆರ್‌ಟಿಸಿ' ಮೊನೊಗ್ರಾಮ್‌ನೊಂದಿಗೆ ಬಳಸುತ್ತಿದ್ದೇವೆ ಎಂದು ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಲ್ಲಿ ಆಕ್ಷೇಪಣೆ ಸಲ್ಲಿಸಿತ್ತು.
ತಿರುವಾಂಕೂರು ರಾಜ್ಯ ಸಾರಿಗೆ ಇಲಾಖೆ (ಟಿಎಸ್‌ಟಿಡಿ) ರಚನೆಯಾದಾಗ ಬ್ರಿಟಿಷ್ ರಾಜನ ಅವಧಿಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು 1965ರಲ್ಲಿ ರಚಿಸಲಾಯಿತು. ಕರ್ನಾಟಕವು ಕೆಎಸ್‌ಆರ್‌ಟಿಸಿ ಹೆಸರನ್ನು 1973ರಿಂದ ಬಳಸಲಾರಂಭಿಸಿತು.
ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಟ್ರೇಡ್ ರಿಜಿಸ್ಟ್ರಿ ಕೇರಳದ ಪರ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸಾರಿಗೆ ಇಲಾಖೆ, ರಾಜ್ಯ ಸಾರಿಗೆ ಇಲಾಖೆಗೆ ಇನ್ಮುಂದೆ ಕೆಎಸ್‌ಆರ್‌ಟಿಸಿ ಎಂದು ಬಳಸಬೇಡಿ ಎಂದು ನೋಟಿಸ್ ಜಾರಿಗೊಳಿಸಲು ನಿರ್ಧರಿಸಿದೆ.