ಬೆಂಗಳೂರು: ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ 'ಗೃಹಲಕ್ಷ್ಮಿ' ಯೋಜನೆಯ ಚಾಲನೆ ಕಾರ್ಯಕ್ರಮ ಇದೀಗ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್ ಆಗಿದೆ ಮತ್ತು ಯೋಜನೆ ಚಾಲನೆ ದಿನಾಂಕ ಆ.30ಕ್ಕೆ ಮುಂದೂಡಿಕೆಯಾಗಿದೆ. ಈ ಹಿಂದೆ ಮೂರು ಬಾರಿ ಚಾಲನೆಯ ದಿನಾಂಕ ಮುಂದೂಡಲಾಗಿತ್ತು. ಇದೀಗ ನಾಲ್ಕನೇ ಬಾರಿ ದಿನಾಂಕ ಮುಂದೂಡಿಕೆಯಾಗಿದೆ. ಮೊದಲು ಆಗಸ್ಟ್ ಮೊದಲ ವಾರ, ಬಳಿಕ ಆ. 17 ಅಥವಾ ಆ.18ರಂದು ಯೋಜನೆ ಚಾಲನೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಮತ್ತೆ ದಿನಾಂಕ ಬದಲು ಮಾಡಿ ಆ. 21ಕ್ಕೆ ನಿಗದಿಯಾಗಿತ್ತು. ಬಳಿಕ ಮತ್ತೆ ಬದಲಾವಣೆ ಮಾಡಿ ಆ.27 ಎಂದು ಮರು ನಿಗದಿ ಮಾಡಲಾಗಿತ್ತು.
ಬೆಳಗಾವಿಯಲ್ಲಿ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಯೋಜನೆಯ ಚಾಲನೆ ಕಾರ್ಯಕ್ರಮವನ್ನು ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ ಮಾಡಲು ನಿರ್ಧರಿಸಲಾಗಿದೆ. ಈ ಮೊದಲು ಬೆಳಗಾವಿಯಲ್ಲಿ ಯೋಜನೆಗೆ ಅದ್ಧೂರಿಯಾಗಿ ಚಾಲನೆ ನೀಡಲು ಸ್ಥಳ ನಿಗದಿ ಮಾಡಲಾಗಿತ್ತು. ಇದರ ಜೊತೆಗೆ ರಾಜ್ಯಾದ್ಯಂತ ವಿಭಾಗವಾರು ಕಾರ್ಯಕ್ರಮಕ್ಕೆ ಏಕ ಕಾಲದಲ್ಲಿ ಚಾಲನೆ ನೀಡಲು ತೀರ್ಮಾನಿಸಲಾಗಿತ್ತು. ಇದೀಗ ಬೆಳಗಾವಿ ಬದಲಿಗೆ ಮೈಸೂರಿಗೆ ಕಾರ್ಯಕ್ರಮ ಶಿಫ್ಟ್ ಆಗಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?: "ಆಗಸ್ಟ್ 30ರಂದು ಮೈಸೂರಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಚಾಮುಂಡೇಶ್ವರಿ ತಾಯಿಯ ಕ್ಷೇತ್ರದಲ್ಲಿ ಈ ಯೋಜನೆಗೆ ಚಾಲನೆ ಸಿಗುತ್ತಿರುವುದು ನನ್ನ ಅದೃಷ್ಟ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ" ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
"ಕಾರ್ಯಕ್ರಮ ಸಿದ್ಧತೆ ವೀಕ್ಷಿಸಲು ಇಂದು ಮೈಸೂರಿಗೆ ತೆರಳುತ್ತಿದ್ದು, ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಯ ಸಚಿವರು, ಶಾಸಕರೊಂದಿಗೆ ಸಭೆ ನಡೆಸುವುದಾಗಿ ಮಾಹಿತಿ ನೀಡಿದರು. ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು. ರಾಹುಲ್ ಗಾಂಧಿ ಅವರ ದಿನಾಂಕ ಹೊಂದಾಣಿಕೆ ದೃಷ್ಟಿಯಿಂದ ಮೈಸೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿ ಕಾರ್ಯಕ್ರಮವನ್ನು ಮೈಸೂರಿನಲ್ಲಿ ನಿಗದಿ ಪಡಿಸಲಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಕೇಂದ್ರದ 'ಪಿಎಂ ವಿಶ್ವಕರ್ಮ ಯೋಜನೆ' ವರದಾನ: ವಿಶ್ವಕರ್ಮ ಸೇವಾ ಪ್ರತಿಷ್ಠಾನ ಮೆಚ್ಚುಗೆ
ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲ್ಲ: ಶಕ್ತಿ ಯೋಜನೆ ಸ್ಥಗಿತಗೊಳ್ಳುತ್ತದೆ ಎಂದು ಇತ್ತೀಚಿಗೆ ಪ್ರಚಾರ ನಡೆದಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ, ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲ್ಲ. ಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಈಗ ಈ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಇಂಥ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ, ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ ಎಂದು ಸ್ಪಷ್ಟನೆ ನೀಡಿದ್ದರು.