ಬೆಂಗಳೂರು: ಕುಮಾರಸ್ವಾಮಿ ‘ಹೆಚ್ಡಿಕೆ’ ಅಲ್ಲ ‘ಸಿಡಿಕೆ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಸಿಡಿ ಬಿಡುಗಡೆ ಮಾಡಿದ್ದರಿಂದ ‘ಹೆಚ್ಡಿಕೆ’, ‘ಸಿಡಿಕೆ’ ಆಗಿದ್ದಾರೆ. ಏಕೆಂದರೆ ಅವರು ನಕಲಿ ಸಿಡಿ ಬಿಡುಗಡೆ ಮಾಡಿದ್ದಾರೆ. 35 ನಕಲಿ ಸಿಡಿಗಳನ್ನು ಬಿಟ್ಟಿದ್ದಾರೆ. ಅದನ್ನು ರಾಜ್ಯದ ಜನ ನಂಬಲ್ಲ ಎಂದು ಕಿಡಿ ಕಾರಿದರು.
ಇಡೀ ರಾಜ್ಯದ ಜನ ಅವ್ರಿಗೆ ಛೀಮಾರಿ ಹಾಕಿದ್ದಾರೆ. ಸಿಸಿಟಿವಿ ಹಾಳು ಮಾಡಿದ ವಿಡಿಯೋ ಸಿಗಲಿಲ್ವಾ ಅವರಿಗೆ? ನೀವು ಇನ್ನೂ ಹತ್ತು ಜನ್ಮ ಎತ್ತಿ ಬಂದರೂ ಮತ್ತೆ ಸಿಎಂ ಆಗಲ್ಲ. ರಾಜ್ಯವನ್ನು ಶಾಂತವಾಗಿರಲು ಬಿಡಿ. ನೀವು ಸಿಎಂ ಆಗಿದ್ದಾಗ ಇದ್ದ ಪೊಲೀಸರೇ ತಾನೇ ಅವರು. ಅವರು ತಮ್ಮ ಜೀವ ಉಳಿಸಿಕೊಳ್ಳಬಾರದಾ ?ಎಂದು ವಾಗ್ದಾಳಿ ನಡೆಸಿದರು.
ಪೊಲೀಸರ ನೈತಿಕತೆ ಕುಗ್ಗಿಸೋ ಕೆಲಸ ಮಾಡುತ್ತಿದ್ದಾರೆ. ಆ ವಿಡಿಯೋಗಳೆಲ್ಲಾ ಕಟ್ ಆ್ಯಂಡ್ ಪೇಸ್ಟ್. ವಿಡಿಯೋ ಬಿಡುಗಡೆ ಮಾಡೋಕೆ ಇಷ್ಟು ಟೈಂ ಬೇಕಿತ್ತಾ? ಆಗಲೇ ಯಾಕೆ ಬಿಡುಗಡೆ ಮಾಡಿಲಿಲ್ಲ? ಇದೆಲ್ಲಾ ಕುಮಾರಸ್ವಾಮಿ ಎಲ್ಲಿಂದ ಕಲಿತು ಬಂದರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಮಂಗಳೂರು ಗಲಭೆ ವಿಚಾರವನ್ನು ಸದನ ಸಮಿತಿಗೆ ಕೊಡಿ ಎಂಬ ಕುಮಾರಸ್ವಾಮಿ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಸದನ ಸಮಿತಿಯಿಂದ ನ್ಯಾಯ ಸಿಗಲ್ಲ. ಬಾಯಿ ಚಪಲಕ್ಕೆ ಕುಮಾರಸ್ವಾಮಿ ಸದನ ಸಮಿತಿ ಮಾಡಿ ಅಂದಿದ್ದಾರೆ. ಸದನ ಸಮಿತಿಯೂ ಕುಮಾರಸ್ವಾಮಿ ಅವರಿಗೆ ಛೀಮಾರಿ ಹಾಕುತ್ತದೆ. ಕುಮಾರಸ್ವಾಮಿ ಹೇಳಿದಂಗೆಲ್ಲ ಕುಣಿಯಕ್ಕಾಗಲ್ಲ ನಾವು ಎಂದು ಹೇಳಿದರು.
ನಕಲಿ ಗಜೆಟ್ ನೋಟಿಫಿಕೇಷನ್ ಬಗ್ಗೆ ಪರಿಶೀಲನೆ:
ಗ್ರಾ.ಪಂ ಚುನಾವಣೆ ಕುರಿತು ನಕಲಿ ಗೆಜೆಟ್ ನೋಟಿಫಿಕೇಷನ್ ಸಂಬಂಧ ಪರಿಶೀಲನೆ ನಡೆಸುತ್ತೇನೆ. ಇಂತಹ ಯಾವುದೇ ಗೆಜೆಟ್ ನೋಟಿಫಿಕೇಷನ್ ಅನ್ನು ನಮ್ಮ ಇಲಾಖೆ ಹೊರಡಿಸಿಲ್ಲ. ಚುನಾವಣಾ ಆಯೋಗದಿಂದ ಯಾವುದೇ ಚುನಾವಣೆ ಘೋಷಣೆಯಾಗಿಲ್ಲ. ಇದು ಯಾರು ಕಳಿಸಿದ್ದು, ಇದರ ಹಿಂದೆ ಯಾರಿದ್ದಾರೆ ಅಂತ ತಿಳ್ಕೋತಿದ್ದೇನೆ. ಇದರ ಹಿಂದೆ ಯಾರೋ ಚಿಕ್ಕಪುಟ್ಟವರು ಇದಾರಾ ಅಥವಾ ಕುಮಾರಸ್ವಾಮಿ ತರಹದವರು ಇದಾರಾ ಅಂತ ಪರಿಶೀಲನೆ ಮಾಡುತ್ತಿದ್ದೇವೆ. ನಮ್ಮ ಇಲಾಖೆಯಲ್ಲೂ ನಕಲಿ ಕುಮಾರಸ್ವಾಮಿ ಇರಬಹುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಾಲೆಳೆದರು.
'ಸಚಿವ ಸಂಪುಟ ವಿಸ್ತರಣೆಗೆ ಆತುರವೇನಿಲ್ಲ'
ಸಂಪುಟ ವಿಸ್ತರಣೆ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಅವರೆಲ್ಲ ಒಂದು ಪಕ್ಷ ಬಿಟ್ಟು ನಮ್ಮ ಪಕ್ಷಕ್ಕೆ ಬಂದು ಗೆದ್ದು ಬಂದಿದ್ದಾರೆ. ಅವರನ್ನು ನಾವು ಕೈ ಬಿಡುವ ಮಾತೇ ಇಲ್ಲ. ಅವರನ್ನು ಮಂತ್ರಿ ಮಾಡುತ್ತೇವೆ. ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಈ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸಚಿವ ಸಂಪುಟ ವಿಸ್ತರಣೆ ಆಗಿಯೇ ಆಗುತ್ತದೆ. ಆದರೆ ಇನ್ನಷ್ಟು ಸಮಯಾವಕಾಶ ಬೇಕು. ಪಕ್ಷದ ವರಿಷ್ಠರೆಲ್ಲಾ ಸೇರಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆತುರ ಏನಿಲ್ಲ ಎಂದು ತಿಳಿಸಿದರು.