ಬೆಂಗಳೂರು: ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರ ಋಣ ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅವರು ರಾಜೀನಾಮೆ ಕೊಟ್ಟಿದ್ದರಿಂದಲೇ ನಮ್ಮ ಸರ್ಕಾರ ಬರಲು ಕಾರಣವಾಯಿತು. ಇಲ್ಲದಿದ್ದರೆ ಸರ್ಕಾರ ಬರುತ್ತಿರಲಿಲ್ಲ. ಅವರಿಗೆ ಬಹಳ ಕಷ್ಟಗಳನ್ನು ಕೊಟ್ಟಿದ್ದಾರೆ. ಅವರ ಋಣವನ್ನು ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ರಾಜರಾಜೇಶ್ವರಿ ನಗರಕ್ಕೆ ಅಭ್ಯರ್ಥಿ ಯಾರು ಎಂಬುದು ನನಗೆ ಅಧಿಕಾರ ಇದ್ದಿದ್ದರೆ ಹೇಳುತ್ತಿದ್ದೆ. ಇವತ್ತಿನವರೆಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಆರ್.ಆರ್. ನಗರ ಉಪಚುನಾವಣೆ ನಡೆಯುತ್ತಿರುವುದು ಬಹಳ ಸಂತೋಷ. ಇಲ್ಲಿ ನೂರಕ್ಕೆ ನೂರರಷ್ಟು ನಾವು ಗೆಲ್ಲುತ್ತೇವೆ ಎಂದು ಹೇಳಿದರು.
ಮುನಿರತ್ನ ಅವರಿಗೆ ಸುಪ್ರೀಂಕೋರ್ಟ್ ರಿಲೀಫ್ ನೀಡಿರುವುದು ಸಂತಸ ತಂದಿದೆ ಎಂದರು. ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ನಾವೇ ಗೆಲ್ಲುತ್ತೇವೆ. ಅದೇ ರೀತಿ ವಿಧಾನಪರಿಷತ್ತಿನ ನಾಲ್ಕು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.