ಬೆಂಗಳೂರು : ಶಕ್ತಿ ಯೋಜನೆಯಿಂದ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಮೌನಕ್ರಾಂತಿ ಹೆಚ್ಚಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಧಾನ ಪರಿಷತ್ನಲ್ಲಿ ಮಾತನಾಡಿದ ಅವರು, ಜನ ಬಸ್ಗಳಲ್ಲಿ ಹೆಚ್ಚಾಗಿ ಓಡಾಡುತ್ತಿದ್ದಾರೆ. ಪ್ರವಾಸೋದ್ಯಮ ಹೆಚ್ಚಾಗುತ್ತಿದೆ. ಮಹಿಳೆಯರು ಮಾತ್ರವಲ್ಲ, ಪುರುಷ ಪ್ರಯಾಣಿಕರು ಹೆಚ್ಚಾಗಿದ್ದಾರೆ . ಶೇ. 20 ರಿಂದ 30 ರಷ್ಟು ಪ್ರಯಾಣಿಕರು ಹೆಚ್ಚಾಗಿದ್ದಾರೆ. ಇದರಿಂದ ಸಾರಿಗೆ ಸಂಸ್ಥೆಗೆ ಆದಾಯ ಬಂದಿದೆ ಎಂದು ಹೇಳಿದ್ದಾರೆ.
ಪ್ರಯಾಣಿಕರ ಹೆಚ್ಚಳದಿಂದ ಸಾರಿಗೆ ನಿಗಮ ಸ್ವಾವಲಂಬಿ ಆಗುತ್ತದೆ. ಇಂದು ಸಾರಿಗೆ ಸಂಸ್ಥೆ ಹೊಸ ವಾಹನ ಖರೀದಿಗೆ, ವಾಹನ ಇದುವರೆಗೂ ತಲುಪದ ಹಳ್ಳಿಗಳಿಗೆ ಬಸ್ ತಲುಪಿಸಬಹುದು. ಉತ್ತಮ ವೇತನ ನೀಡಬಹುದು. ಇದುವರೆಗೂ ಇದಕ್ಕಾಗಿ ಸರ್ಕಾರವನ್ನು ಅವಲಂಬಿಸಿ ಇರಬೇಕಿತ್ತು. ಆದರೆ, ಈಗ ಸರ್ಕಾರದ ಕಡೆ ನೋಡಬೇಕಿಲ್ಲ. ನಾಲ್ಕೂ ನಿಗಮಗಳು ಲಾಭಕ್ಕೆ ಬಂದಿದೆ. ಇದರಿಂದ ಶಕ್ತಿ ಯೋಜನೆ ನಷ್ಟವಲ್ಲ, ಲಾಭದ ಹಳಿಗೆ ಬಂದಿದೆ ಎಂದರು.
ಬಡವರ ಬಗ್ಗೆ ಇಷ್ಟು ಅಸಡ್ಡೆ ಬೇಡ: ಹೊಟ್ಟೆ ತುಂಬಿದವರು, ಹಸಿದವರ ಬಗ್ಗೆ ಅಸಡ್ಡೆಯಿಂದ ಮಾತನಾಡುವುದು ಸಾಮಾನ್ಯ. ಶ್ರೀಮಂತರ ಸಾಲ ಮನ್ನಾ ಮಾಡಿದರೆ ಸರಿ, ಬಡವರಿಗೆ ಅನ್ನ ಕೊಟ್ಟರೆ ಅದಕ್ಕೆ ಆಕ್ರೋಶ. ಬಡವರ ಬಗ್ಗೆ ಯಾಕೆ ಸಿಟ್ಟು. ಶ್ರೀಮಂತರ ಸಾಲ ಮನ್ನಾ ಮಾಡಿದಾಗ ಆಕ್ರೋಶ ಯಾಕೆ ಎಂದು ಪ್ರಶ್ನಿಸಿದರು. ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಹಾಗೂ ಇತರ ಸದಸ್ಯರು ಹಾಗೂ ಸಚಿವ ಕೃಷ್ಣ ಬೈರೇಗೌಡ ನಡುವೆ ತೀವ್ರ ವಾಗ್ವಾದ ನಡೆಯಿತು. ಸಾಲ ಮನ್ನಾ ಮಾತನಾಡುವವರು, ಇದಕ್ಕೂ ಮುನ್ನ ಸಾಲಕೊಟ್ಟಿದ್ದು ಯಾರು?ಎನ್ನುವುದನ್ನು ಹೇಳಿ ಅಂದರು. ಕೃಷ್ಣ ಬೈರೇಗೌಡರು ಬಡವರ ಬಗ್ಗೆ ಇಷ್ಟು ಅಸಡ್ಡೆ ಬೇಡ. ಸಂಸತ್ ನಲ್ಲಿ ಶ್ರೀಮಂತರ ಸಾಲ ಮನ್ನಾ ವಿಚಾರ ಬಂದಾಗ ಮಾತನಾಡುವವರೇ ಇಲ್ಲ ಎಂದರು.
ಒಟ್ಟಾರೆ ಬಿಜೆಪಿ ಸದಸ್ಯ ಡಿ ಎಸ್ ಅರುಣ್ ಅವರು ತಮ್ಮ ಮಾತಲ್ಲಿ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಬಗ್ಗೆ ಟೀಕೆ ಮಾಡಿದಾಗ ಸಚಿವ ಕೃಷ್ಣ ಬೈರೇಗೌಡ ಸಮಜಾಯಿಷಿ ನೀಡಿದರು. ಅದು ದೊಡ್ಡ ಗದ್ದಲಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯ ಡಿ. ಎಸ್ ಅರುಣ್ ಮಾತನಾಡಿ, ದೇಶದಲ್ಲಿ ಬಡ ಹೆಣ್ಣುಮಕ್ಕಳು ಮಾತ್ರ ಇಲ್ಲ. ಗಂಡು ಮಕ್ಕಳೂ ಇದ್ದಾರೆ. ಸಾರಿಗೆ ರಾಜ್ಯದ ಎಲ್ಲ ಭಾಗ ತಲುಪಲಿಲ್ಲ. ಅದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದರು.
ಯೋಜನೆಯಲ್ಲಿ ಅವ್ಯವಹಾರ ಆಗುತ್ತಿದೆ: ರಾಜ್ಯದ ಯಾವ್ಯಾವ ತಾಲೂಕಿನಲ್ಲಿ ಸಾರ್ವಜನಿಕ ಸಾರಿಗೆ ಇಲ್ಲ. 13 ಜಿಲ್ಲೆ, 53 ತಾಲೂಕಿನಲ್ಲಿ ಸರ್ಕಾರಿ ಬಸ್ ಸೇವೆ ಇಲ್ಲ. ಈ ಭಾಗದ ಹೆಣ್ಣು ಮಕ್ಕಳು ಮಾಡಿದ ತಪ್ಪೇನು? ಯೋಜನೆಯಲ್ಲಿ ಅವ್ಯವಹಾರ ಆಗುತ್ತಿದೆ ಗಮನಿಸಬೇಕು. ಗೃಹಜ್ಯೋತಿ 200 ಯೂನಿಟ್ಗೆ ವಿನಾಯಿತಿ ನೀಡಿಬಿಡಿ. ನಿಯಮ ನಿರ್ಬಂಧ ಯಾಕೆ? ಜನರಿಗೆ ನಿರಾಸೆ ಮಾಡಿದ್ದೀರಿ. ಭಾಗ್ಯಲಕ್ಷಿ ಹಣ ಖಾತೆಗೆ ಹೋದ ಬಳಿಕ ಅತ್ತೆ-ಸೊಸೆ ನಡುವೆ ಎಷ್ಟು ಗದ್ದಲ ಆಗಲಿದೆ ನೋಡಬೇಕು. ಅನ್ನಭಾಗ್ಯ ಆರಂಭವಾಗಿದೆ. ಯುವನಿಧಿ ಆರಂಭವಾಗಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ: ಅಡ್ಜೆಸ್ಟ್ಮೆಂಟ್ ರಾಜಕೀಯ ಮಾಡಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಸಿಎಂ ಸಿದ್ದರಾಮಯ್ಯ ಸವಾಲು!