ಬೆಂಗಳೂರು: ಸರ್ವೇ ಇಲಾಖೆಯಲ್ಲಿ ಕೆಲವು ಗೊಂದಲಗಳಿಂದಾಗಿ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪಹಣಿ 3 ಮತ್ತು 9 ಹಾಗೂ ಆಕಾರಬಂದು ಆರ್ಟಿಸಿ ವ್ಯತ್ಯಾಸದ ಪ್ರಕರಣಗಳ ಕಾರಣಕ್ಕೆ ದಿನಂಪ್ರತಿ ಸರ್ಕಾರಿ ಕಚೇರಿಗೆ ಅಲೆಯುವಂತಾಗಿದೆ. ಇಂಥ ಪ್ರಕರಣಗಳಿಗೆ ಆದಷ್ಟು ಬೇಗ ಮುಕ್ತಿ ನೀಡಿ ರೈತರಿಗೆ ನೆಮ್ಮದಿ ನೀಡಬೇಕು ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿದ ಅವರು, "ರಾಜ್ಯದಲ್ಲಿ ಪಹಣಿ 3 ಮತ್ತು 9 ವ್ಯತ್ಯಾಸವಿರುವ 54,175 ಪ್ರಕರಣಗಳು ದಾಖಲಾಗಿವೆ. ಆಕಾರಬಂದು ಮತ್ತು ಆರ್ಟಿಸಿ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಒಟ್ಟು 1,12,865 ಪ್ರಕರಣಗಳಿವೆ. ಈ ಪ್ರಕರಣಗಳ ಇತ್ಯರ್ಥಕ್ಕಾಗಿ ರೈತರು ಸರ್ಕಾರಿ ಕಚೇರಿಗೆ ಅಲೆಯುತ್ತಿದ್ದಾರೆ. ಈ ಸಮಸ್ಯೆಗಳಿಗೆ ಮುಕ್ತಿಯೇ ಇಲ್ಲವೇ?, ಜನರಿಗೆ ಪ್ರತಿನಿಧಿಗಳಾಗಿ ನಾವು ಅವರಿಗೆ ಏನೆಂದು ಉತ್ತರಿಸಬೇಕು" ಎಂದು ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದ್ದಾರೆ.
"ಈ ಎಲ್ಲಾ ತಿದ್ದುಪಡಿ ಪ್ರಕರಣಗಳಿಗೆ ಅಳತೆಯ ಅವಶ್ಯಕತೆ ಇದೆಯಾ ಎಂಬುದನ್ನು ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು. ಸರ್ವೇ ಇಲಾಖೆ ತಹಶೀಲ್ದಾರ್ ಗ್ರೇಡ್ ಅಧಿಕಾರಿಗಳಿಗೆ ತಿಂಗಳು ಅಥವಾ ವಾರಕ್ಕೆ ಇಂತಿಷ್ಟು ಪ್ರಕರಣವೆಂದು ಗುರಿ ನಿಗದಿಪಡಿಸಿ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು" ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಪೋಡಿ ಮುಕ್ತ ಗ್ರಾಮದ ಬಗ್ಗೆಯೂ ಚರ್ಚಿಸಲಾಯಿತು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, "ರಾಜ್ಯದಲ್ಲಿ ಈಗಾಗಲೇ 17,000 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳು ಎಂದು ಘೋಷಿಸಲಾಗಿದೆ. 14,000 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮ ಎಂದು ಘೋಷಿಸುವುದು ಬಾಕಿ ಇದೆ. ಈಗಾಗಲೇ ರಾಮನಗರ ಜಿಲ್ಲೆಯಲ್ಲಿ "ಡ್ರೋನ್ ತಂತ್ರಜ್ಞಾನ" ಆಧಾರಿತ ಭೂ ಮರು-ಮಾಪನಕ್ಕೆ (ರೀ ಸರ್ವೇ) ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಈ ಪ್ರಯೋಗ ಯಶಸ್ವಿಯಾಗಿದೆ. ಇದನ್ನೇ ಆಧರಿಸಿ ರಾಜ್ಯಾದ್ಯಂತ ಮತ್ತೊಮ್ಮೆ ಭೂ ಮರುಮಾಪನ ಮಾಡಿ ಪೋಡಿ ಮರು ಅಭಿಯಾನಕ್ಕೆ ಚಾಲನೆ ನೀಡಿ" ಎಂದರು.
ನಮೂನೆ 57ರ ಅಡಿಯಲ್ಲಿ ಸಾಗುವಳಿ ಭೂಮಿ ಮಂಜೂರು ಮಾಡಲು ರಾಜ್ಯಾದ್ಯಂತ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಎಲ್ಲಾ ಅರ್ಜಿಗಳನ್ನೂ ಕಾನೂನಿನ ಮಿತಿಯೊಳಗೆ ಯಾರ ಪ್ರಭಾವಕ್ಕೂ ಒಳಗಾಗದೆ, ಶೀಘ್ರವಾಗಿ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಬೇಕು. ಈ ನಮೂನೆ 57ರ ಅರ್ಜಿಯ ಅಡಿಯಲ್ಲಿ ಈ ಹಿಂದೆಯೇ ಭೂಮಿ ಮಂಜೂರಾಗಿದ್ದರೆ ಅಧಿಕಾರಿಗಳು ಪೋಡಿ ಮುಕ್ತ ಮಾಡುವ ಅಥವಾ ಏಕ ವ್ಯಕ್ತಿ ಅಡಿಯಲ್ಲಿ ಪೋಡಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಿ. ಮುಂದಿನ ದಿನಗಳಲ್ಲಿ ಫಾರಂ 57ರ ಅರ್ಜಿಗಳನ್ನು ಮಂಜೂರು ಮಾಡುವ ಮುನ್ನ ಭೂಮಿಯನ್ನು ಅಳತೆ ಮಾಡಿ ಮಂಜೂರು ನಕ್ಷೆ ತಯಾರಿಸಿದ ನಂತರ ಸಾಗುವಳಿ ಚೀಟಿ ನೀಡಿ ಪೋಡಿ ಪ್ರಕ್ರಿಯೆ ನಡೆಸಿ ನೋಂದಾಯಿಸಿ ಹಕ್ಕು ದಾಖಲೆಗಳನ್ನು ತಯಾರಿಸಿ ಎಂದು ಸಚಿವರು ಸಲಹೆ ನೀಡಿದ್ದಾರೆ.
ಕಂದಾಯ ಹಾಗೂ ಅರಣ್ಯ ಜಮೀನುಗಳ ನಡುವಿನ ಗಡಿಯ ಬಗ್ಗೆ ಸಾಕಷ್ಟು ಸ್ಪಷ್ಟತೆ ಇಲ್ಲದ ಕಾರಣಕ್ಕೂ ಜನ ಸಾಕಷ್ಟು ತೊಂದರೆಗೆ ಒಳಗಾಗುತ್ತಿದ್ದಾರೆ. ಇಲಾಖೆಗೂ ಇದರಿಂದ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಶೀಘ್ರವಾಗಿ ಹಲವಾರು ಸರ್ವೇ ನಂಬರ್ಗಳಲ್ಲಿ ಹಂಚಿ ಹೋಗಿರುವ ಅರಣ್ಯ ಹಾಗೂ ಕಂದಾಯ ಭೂಮಿಗಳನ್ನು ಗುರುತಿಸಿ, ಸರ್ವೇ ನಂಬರ್ಗಳನ್ನು ಶೀಘ್ರವಾಗಿ ಅಳತೆ ಕೈಗೊಂಡು ಗಡಿ ಗುರುತಿಸಿ ದಾಖಲೆಗಳನ್ನು ತಯಾರಿಸಿ ಎಂದಿರುವ ಸಚಿವರು, ರಾಜ್ಯದಲ್ಲಿ ಹಲವು ಸ್ವರೂಪಗಳಲ್ಲಿ ಸರ್ಕಾರಿ ಜಮೀನುಗಳಿದ್ದು, ಎಲ್ಲಾ ಸರ್ಕಾರಿ ಸರ್ವೇ ನಂಬರ್ಗಳನ್ನೂ ಒಂದು ಬಾರಿ ಅಳತೆ ಮಾಡಿ ಸಂರಕ್ಷಿಸಿ ಎಂದರು.
ಆರು ತಿಂಗಳಲ್ಲಿ 20 ಜಿಲ್ಲೆಗಳಿಗೆ ಪ್ರವಾಸ: ಸಚಿವ ಕೃಷ್ಣ ಬೈರೇಗೌಡರು ಕಳೆದ ಆರು ತಿಂಗಳಲ್ಲಿ 20 ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದರು. ಎಲ್ಲಾ ಜಿಲ್ಲೆಗಳಲ್ಲೂ ಜನರ ಸಮಸ್ಯೆಗಳನ್ನು ಖುದ್ದು ಆಲಿಸಿದ್ದಾರೆ. ಅಲ್ಲದೆ, ಎಲ್ಲಾ ಜಿಲ್ಲೆಗಳಲ್ಲೂ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.
ಸಭೆಗಳಲ್ಲಿ ಪಹಣಿ 3 ಮತ್ತು 9 ಹಾಗೂ ಆಕಾರಬಂದು ಆರ್ಟಿಸಿ ವ್ಯತ್ಯಾಸದ ಪ್ರಕರಣಗಳು ಮತ್ತು ನಮೂನೆ 50, 53, 57 ಅರ್ಜಿಗಳ ಇತ್ಯರ್ಥದ ಬಗ್ಗೆಯೇ ಹೆಚ್ಚು ಗಮನ ಸೆಳೆದಿದ್ದ ಸಚಿವರು, ಈ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ನೀಡುವ ಸಲುವಾಗಿ ಇದೀಗ ರಾಜ್ಯಾದ್ಯಂತ ರೀ ಸರ್ವೇ ನಡೆಸಲು ಆಲೋಚಿಸಿದ್ದಾರೆ. ರಾಜ್ಯದಲ್ಲಿ 1920ರಲ್ಲಿ ಬ್ರಿಟೀಷರ ಕಾಲದಲ್ಲಿ ಕೊನೆಯ ಬಾರಿ ಸರ್ವೇ ನಡೆಸಲಾಗಿತ್ತು.
ಇದನ್ನೂ ಓದಿ: ಕೇಂದ್ರದಿಂದ ಸಿಗದ ಬರ ಪರಿಹಾರ; ಬಿಜೆಪಿ ಶಾಸಕರು, ಸಂಸದರ ವಿರುದ್ಧ ಕೃಷ್ಣ ಬೈರೇಗೌಡ ವಾಗ್ದಾಳಿ