ಬೆಂಗಳೂರು : 371ಜೆ ಅಡಿ ಆದಷ್ಟು ಬೇಗ ಹೈದರಾಬಾದ್ ಕರ್ನಾಟಕ ಭಾಗದ ಸರ್ಕಾರದ ಎಲ್ಲಾ ಇಲಾಖೆಗಳ ಉದ್ಯೋಗದಲ್ಲಿ ಶೇ.75-85ರಷ್ಟು ಹಾಗೂ ಉಳಿದ ಜಿಲ್ಲೆಗಳಲ್ಲಿ ಶೇ.8ರಷ್ಟು ಮೀಸಲಾತಿ ಪ್ರಮಾಣ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ನಿಯಮ 72ರಡಿ ಗಮನ ಸೆಳೆಯುವ ಸೂಚನೆಯಡಿ ವಿಷಯ ಮಂಡಿಸಿದ ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್, ಹೈದರಾಬಾದ್ ಕರ್ನಾಟಕ ಭಾಗದ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣ ಶೇ.100ಕ್ಕೆ 100ರಷ್ಟು ಹಾಗೂ ಉಳಿದ ಜಿಲ್ಲೆಗಳಲ್ಲಿ ಶೇ.8ರಷ್ಟನ್ನು ಅನುಷ್ಠಾನಕ್ಕೆ ತರುವಲ್ಲಿ ವಿಳಂಬ ಧೋರಣೆ ತಾಳಿದ್ದು, ಕೂಡಲೇ ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಸರ್ಕಾರದ ಗಮನ ಸೆಳೆದರು.
ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013ರ ಕಂಡಿಕೆ 3ರಲ್ಲಿ ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿರುವ ಸಿವಿಲ್ ಸೇವಾ ಹುದ್ದೆಗಳಲ್ಲಿನ ಗ್ರೂಪ್-ಎ (ಕಿರಿಯ ಶ್ರೇಣಿ) ಮತ್ತು ಗ್ರೂಪ್-ಬಿ ಹುದ್ದೆಗಳಲ್ಲಿ ಶೇ.75ರಷ್ಟು ಹುದ್ದೆಗಳನ್ನು, ಗ್ರೂಪ್-ಸಿ ಹುದ್ದೆಗಳಲ್ಲಿ ಶೇ.80ರಷ್ಟು ಹಾಗೂ ಗ್ರೂಪ್-ಡಿ ಹುದ್ದೆಗಳಲ್ಲಿ ಶೇ.85ರಷ್ಟು ಹುದ್ದೆಗಳನ್ನು ಹೈದ್ರಾಬಾದ್-ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
ಹಾಗೆಯೇ ಮೇಲಿನ ಆದೇಶದ ಕಂಡಿಕೆ 13ರಲ್ಲಿ ರಾಜ್ಯಮಟ್ಟದ ಕಚೇರಿ ಮತ್ತು ಸಂಸ್ಥೆಗಳಲ್ಲಿನ ಎಲ್ಲಾ ವೃಂದದ ಹುದ್ದೆಗಳಲ್ಲಿ ಶೇ.8ರಷ್ಟು ಹುದ್ದೆಗಳನ್ನು ಹೈದ್ರಾಬಾದ್-ಕರ್ನಾಟಕ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಅದರಂತೆ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ಈಗಾಗಲೇ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿರುತ್ತದೆ.
ಯಾವುದೇ ಇಲಾಖೆಯಲ್ಲಿ ಮೇಲಿನ ಅವಕಾಶದಂತೆ ಮೀಸಲಾತಿ ನಿಗದಿಪಡಿಸದೇ ಇರುವ ಬಗ್ಗೆ ದೂರು ಸ್ವೀಕೃತವಾದಲ್ಲಿ ಅಂತಹ ಇಲಾಖೆಗಳಿಂದ ವರದಿ ಪಡೆದು ಮೀಸಲಾತಿ ನಿಗದಿಪಡಿಸುವಂತೆ ನಿರ್ದೇಶನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಸದಸ್ಯರು ಕೋರಿರುವಂತೆ ಹೈದ್ರಾಬಾದ್-ಕರ್ನಾಟಕ ಭಾಗದ ಎಲ್ಲಾ ಇಲಾಖೆಗಳಲ್ಲಿನ ಹುದ್ದೆಗಳಲ್ಲಿ ಶೇ.100ರಷ್ಟು ಹುದ್ದೆಗಳನ್ನು ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸುವ ಹಾಗೂ ಹೈದ್ರಾಬಾದ್ ಕರ್ನಾಟಕ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಶೇ.8ರಷ್ಟು ಹುದ್ದೆಗಳನ್ನು ಮೀಸಲಿರಿಸಲು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಎಂದರು.
ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವೆಂಕಟೇಶ್, ಖಾಲಿ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಒಪ್ಪಿಗೆ ಅಗತ್ಯವಿಲ್ಲ ಆದರೂ ಸರ್ಕಾರ ಕಾದು ಕುಳಿತಿದೆ, ಹುದ್ದೆ ಭರ್ತಿ ಮಾಡದೇ ಖಾಲಿ ಉಳಿಸಿಕೊಂಡಲ್ಲಿ 371ಜೆ ತಂದು ಉಪಯೋಗವೇನು ಎಂದು ಬೇಸರ ವ್ಯಕ್ತಪಡಿಸಿ ಕೂಡಲೇ ಹುದ್ದೆಗಳ ಭರ್ತಿಗೆ ಮುಂದಾಗಬೇಕು,ಸಮಯವನ್ನು ಪ್ರಕಟಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಕೋಟ ಶ್ರೀನಿವಾಸ ಪೂಜಾರಿ, 7 ಜಿಲ್ಲೆಗಳಲ್ಲಿ ಗ್ರೂಪ್ ಎ ಮತ್ತು ಬಿಯಲ್ಲಿ ಶೇ.75, ಗ್ರೂಪ್ ಸಿಯಲ್ಲಿ ಶೇ.80 ರಷ್ಟು, ಗ್ರೂಪ್ ಡಿ ಅಡಿ ಶೇ.85ರಷ್ಟು ಉದ್ಯೋಗದಲ್ಲಿ ಮೀಸಲು ಕಲ್ಪಿಸಲಾಗಿದೆ. ರಾಜ್ಯದ ಎಲ್ಲಾ ಇಲಾಖೆಯಲ್ಲಿ ಶೇ.8ರಷ್ಟು ಮೀಸಲು ಕಲ್ಪಿಸಲು ಸುತ್ತೋಲೆ ಹೊರಡಿಸಲಾಗಿದೆ.
ಮೀಸಲು ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಅನುಮತಿ ಅಗತ್ಯವಿಲ್ಲ ಎನ್ನುವುದು ನಿಜ. ನೇಮಕಾತಿ ಮಾಡಿ ನಂತರ ಅನುಮೋದನೆ ಪಡೆಯಬಹುದು. ಆದರೆ, ಕೊರೊನಾ ಕಾರಣಕ್ಕೆ ಇದು ಕಷ್ಟವಾಗಿದೆ, ಈಗ ನೇಮಕ ಮಾಡಿಕೊಳ್ಳಲಾಗುತ್ತದೆ. ಹಣಕಾಸು ಇಲಾಖೆ ಅನುಮತಿ ಬೇಕಿಲ್ಲ ಎಂದು ಗಮನಕ್ಕೆ ತಾರದೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಆರ್ಥಿಕ ವರ್ಷದಲ್ಲಿ ಪ್ರಾಧಾನ್ಯತೆ ಕೊಟ್ಟು ಮೀಸಲು ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಹಣಕಾಸು ತೊಂದರೆ ಇಲ್ಲ ಎಂದರೆ ಭರ್ತಿ ಮಾಡಿ ಎಂದು ಸೂಚಿಸಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಈಗಾಗಲೇ ಸಂಪುಟ ಉಪ ಸಮಿತಿ ರಚನೆಯಾಗಿದೆ. ಎರಡು ತಿಂಗಳಿನಲ್ಲಿ ಹುದ್ದೆ ಭರ್ತಿ ಮಾಡಬೇಕು 1 ತಿಂಗಳಿನಲ್ಲಿ ಮುಂಬಡ್ತಿ ಭರ್ತಿ ಮಾಡಬೇಕು ಎಂದು ಶಿಫಾರಸು ಮಾಡಿದೆ. ಆದಷ್ಟು ಬೇಗ ಹುದ್ದೆ ಭರ್ತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.