ಬೆಂಗಳೂರು: ಕನಕ ಗುರುಪೀಠದ ಸ್ವಾಮೀಜಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹಾಲುಮತ ಸಮುದಾಯದ ಬೇಡಿಕೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿರಸ್ಕರಿಸಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿ ಸಿಎಂ ಬಿಎಸ್ವೈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಳಿಯಾರು ಪಟ್ಟಣದಲ್ಲಿನ ವೃತ್ತಕ್ಕೆ ಕನಕ ವೃತ್ತ ಎಂದು ಹೆಸರು ಇಡಲು ನನ್ನ ತಕರಾರಿಲ್ಲ. 2006ರಲ್ಲಿ ಗ್ರಾಮ ಪಂಚಾಯತಿಯಿಂದ ಅನುಮೋದನೆ ಸಿಕ್ಕಿತ್ತು ಎಂದು ನನಗೆ ಗೊತ್ತಿರಲಿಲ್ಲ. ಹಾಗಾಗಿ ವೃತ್ತ ನಿರ್ಮಾಣ ನಿಲ್ಲಿಸಲು ಹೇಳಿದ್ದೆ. ಆದರೆ ಈಗ ಪಟ್ಟಣ ಪಂಚಾಯತ್ ಬರಲಿದೆ. ಅಲ್ಲಿ ಮತ್ತೊಮ್ಮೆ ಅನುಮೋದನೆ ಪಡೆದುಕೊಂಡು ಕನಕ ಹೆಸರು ನಾಮಕರಣ ಮಾಡಿ. ನನ್ನದೂ ಸಹಕಾರ ಇದೆ. ಅದಕ್ಕೆ ನನ್ನದೇನೂ ತಕರಾರಿಲ್ಲ ಎಂದರು.
ಈಶ್ವರಾನಂದಪುರಿ ಸ್ವಾಮೀಜಿ ಅವರ ಬಗ್ಗೆ ನಾನು ಅವಹೇಳನಕಾರಿಯಾಗಿ ಮಾತನಾಡಿಲ್ಲ. ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೂ ಉದ್ಭವವಾಗಲ್ಲ. ಅದಕ್ಕಿಂತ ಹೆಚ್ಚು ಏನೂ ಹೇಳಲ್ಲ. ಯಾವ ಸ್ವಾಮೀಜಿಗೂ ಅಪಚಾರ ಮಾಡಲ್ಲ. ಏಕವಚನ ಬಳಸಲ್ಲ. ಸಿದ್ದಗಂಗಾ ಸ್ವಾಮೀಜಿ ಸಂಸ್ಕಾರದಲ್ಲಿ ಬೆಳೆದು ಬಂದಿದ್ದೇವೆ. ಖಾವಿ ಹಾಕಿರುವ ಎಲ್ಲರಿಗೂ ಸಿದ್ದಗಂಗಾ ಶ್ರೀಗಳಿಗೆ ಕೊಡುವಷ್ಟೇ ಗೌರವ ಕೊಡುತ್ತೇವೆ ಎಂದು ಕ್ಷಮೆ ಕೇಳುವ ಬೇಡಿಕೆಯನ್ನು ತಿರಸ್ಕರಿಸಿದರು.
ಸ್ವಾಮಿಗಳು ವಿವಾದಕ್ಕೆ ಬರುವುದು, ಚರ್ಚೆಯಲ್ಲಿ ಭಾಗವಹಿಸುವುದು, ಅವರೇನಾದರೂ ಹೇಳುವುದು ಅದಕ್ಕೆ ನಾವು ಇನ್ನೇನೋ ಹೇಳುವುದು. ಆಗ ನಮಗೆ ಅವಮಾನ ಆಯ್ತು ಎನ್ನುವ ಸ್ಥಿತಿಯನ್ನು ಸ್ವಾಮೀಜಿಗಳು ನಿರ್ಮಾಣ ಮಾಡಿಕೊಳ್ಳಬಾರದು ಎಂದು ಪ್ರಸ್ತುತ ಸನ್ನಿವೇಶಕ್ಕೆ ಬೇಸರ ವ್ಯಕ್ತಪಡಿಸಿದರು.
ನಾನು ಕುರುಬ ಸಂಘದ ಲೀಡರ್. ಈ ಸಂಘದ ಅಧ್ಯಕ್ಷ, ಆ ಸಂಘದ ಅಧ್ಯಕ್ಷ ಅಂತ ನನಗೆ ಫೋನ್ ಮೂಲಕ ಹೆರಾಸ್ಮೆಂಟ್ ಮಾಡುತ್ತಿದ್ದಾರೆ. ನಿನಗೆ ಹೀಗೆ ಮಾಡ್ತೇನಿ ಹಾಗೇ ಮಾಡ್ತೇನಿ ಅಂತೆಲ್ಲಾ ಫೋನ್ನಲ್ಲಿ ಹೇಳುತ್ತಿದ್ದಾರೆ. ಏನ್ ಮಾಡ್ತಾರ್ ರೀ ನನ್ನ, ಇದಕ್ಕೆಲ್ಲಾ ನಾನು ಹೆದರಲ್ಲ. ಇದನ್ನು ಗಂಭೀರವಾಗಿಯೂ ಪರಿಗಣಿಸಲ್ಲ ಎಂದರು.
ಸ್ವಾಮೀಜಿಗಾಗಿ ಎರಡು ಗಂಟೆ ಕಾದಿದ್ದೆ. ಆದರೆ ತಡವಾಗಿ ಬಂದ ಮೇಲೆ ಸೌಜನ್ಯಕ್ಕೂ ತಡ ಆಯ್ತು ಅಂತ ಹೇಳಿಲ್ಲ. ಕನಕದಾಸರ ಹೆಸರು ಇಡುವುದಕ್ಕೆ ಕಟೀಬದ್ಧವಾಗಿದ್ದೆ. ನಿಜವಾಗಿ ಹೆಸರು ಇಡಬೇಕು ಅಂತ ಇದ್ದಿದ್ದರೆ ಈ ವಿವಾದ ಸೃಷ್ಟಿ ಮಾಡ್ತಾ ಇರ್ಲಿಲ್ಲ ಎಂದರು.