ಬೆಂಗಳೂರು: ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗೆ ತುತ್ತಾಗಿ ಆಶ್ರಯ ಅರಸಿ ಬಂದ ವಿದ್ಯಾರ್ಥಿಗಳ ಜತೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಇಂದು ಹುಟ್ಟುಹಬ್ಬ ಆಚರಿಸಿಕೊಂಡರು. ಚಾಮರಾಜಪೇಟೆಯ ಸೇಂಟ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಆಶ್ರಯ ಪಡೆಯುತ್ತಿರುವ 29 ವಿದ್ಯಾರ್ಥಿನಿಯರ ಸಂಪೂರ್ಣ ಶಿಕ್ಷಣ ಹಾಗೂ ಆರೈಕೆ ವೆಚ್ಚ ಭರಿಸುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿ ಎರಡು ಲಕ್ಷ ರೂ. ನೀಡಿದರು.
ಮಣಿಪುರ ವಿದ್ಯಾರ್ಥಿಗಳ ಜತೆ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಸಚಿವರು, ಇಲ್ಲಿ ಸುರಕ್ಷಿತವಾಗಿರಿ ನಿಮಗೆ ಏನೇ ಬೇಕಾದರೂ ನಾನೇ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಮಣಿಪುರ ವಿದ್ಯಾರ್ಥಿಗಳ ಜತೆಯೇ ಉಪಹಾರ ಸೇವಿಸಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 250 ವಿದ್ಯಾರ್ಥಿಗಳಿಗೂ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ರಾತ್ರಿ ಊಟದ ವ್ಯವಸ್ಥೆ ಮಾಡಿದರು.
ಒಟ್ಟು ಮಣಿಪುರದಿಂದ 200 ವಿದ್ಯಾರ್ಥಿಗಳು ಆಶ್ರಯ ಪಡೆಯಲು ಬಂದಿದ್ದು, 29 ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದು, ಉಳಿದವರಿಗೆ ಇದೇ ಸಂಸ್ಥೆಯ ಬೇರೆ ಕಡೆ ಆಶ್ರಯ ನೀಡಲಾಗಿದೆ. ಈ ವಿದ್ಯಾರ್ಥಿಗಳು ಏಳು ವರ್ಷ ಇಲ್ಲೇ ವಿದ್ಯಾಭ್ಯಾಸ ಪಡೆಯಲಿದ್ದಾರೆ.
ಕಳೆದ 3 ತಿಂಗಳಿನಿಂದ ನಡೆಯುತ್ತಿರುವ ಮಣಿಪುರ ಜನಾಂಗೀಯ ಹಿಂಸಾಚಾರ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಕಳೆದ ಮೂರು ತಿಂಗಳುಗಳಿಂದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಹಿಂಸಾಚಾರ ನಡೆಯುತ್ತಿದ್ದು, ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಸಮುದಾಯಗಳ ನಡುವಿನ ಕಲಹದಿಂದಾಗಿ ಇದುವರೆಗೆ ಸುಮಾರು 180 ಜನ ಸಾವನ್ನಪ್ಪಿದ್ದಾರೆ. ಮಣಿಪುರದ ಜನಾಂಗೀಯ ಹಿಂಸಾಚಾರದಿಂದಾಗಿ ರಾಜ್ಯದಲ್ಲಿ ಅಗತ್ಯ ವಸ್ತುಗಳ ಕೊರತೆಯೂ ಕಂಡುಬಂದಿದೆ. ಮಣಿಪುರದ ಜನರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಜೊತೆಗೆ ಇತರ ರಾಜ್ಯಗಳು ಅಗತ್ಯ ವಸ್ತುಗಳನ್ನು ಮಣಿಪುರಕ್ಕೆ ಪೂರೈಕೆ ಮಾಡುತ್ತಿವೆ. ಮಾತ್ರವಲ್ಲದೆ ಮಣಿಪುರದ ವಿದ್ಯಾರ್ಥಿಗಳು ಆಶ್ರಯದ ಜೊತೆಗೆ ಶಿಕ್ಷಣವನ್ನೂ ಅರಸಿ ಇತರ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ. ಆಶ್ರಯ ಅರಸಿ ಬಂದವರಿಗೆ ಹಲವಾರು ರಾಜ್ಯಗಳು ಆಶ್ರಯವನ್ನು ನೀಡುತ್ತಿವೆ.
ಜನಾಂಗೀಯ ಕಲಹದ ಮಧ್ಯೆಯೇ ಸಮುದಾಯವೊಂದರ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿದ್ದ ವಿಡಿಯೋ ಕೂಡ ವೈರಲ್ ಆಗಿ, ದೇಶಾದ್ಯಂತ ಸಂಚಲನ ಉಂಟುಮಾಡಿತ್ತು. ಮಣಿಪುರದಲ್ಲಿ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ನೀಡುವಂತೆ ಲೋಕಸಭಾ ಅಧಿವೇಶನದಲ್ಲೂ ವಿರೋಧ ಪಕ್ಷಗಳ ನಾಯಕರಿಂದ ಒತ್ತಾಯದ ಜೊತೆಗೆ ಪ್ರತಿಭಟನೆಯೂ ನಡೆದಿತ್ತು.
ಇದನ್ನೂ ಓದಿ : Watch.. ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರಕ್ಕೆ ಈರುಳ್ಳಿ ರವಾನೆ!