ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗಲಿದ್ದು, ಇದೀಗ ಜೆಡಿಎಸ್ ಬಿಜೆಪಿ ಬಿ ಟೀಮ್ ಎಂಬುದು ಸಾಬೀತಾಗಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಜೆಡಿಎಸ್ ಇನ್ಮುಂದೆ ಜಾತ್ಯತೀತ ಪದ ತೆಗೆಯುವುದು ಸೂಕ್ತ ಎಂದು ಹೇಳಿದರು. 2019 ರಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು. ನಾವು ಪ್ರತ್ಯೇಕವಾಗಿ ಹೋಗಿದ್ದರೆ ಕನಿಷ್ಠ ಹತ್ತು ಸ್ಥಾನ ಗೆಲ್ಲುತ್ತಿದ್ದೆವು. ಜೆಡಿಎಸ್ ಜೊತೆ ಹೋಗಿದ್ದಕ್ಕೆ ಒನ್ ಡಿಜಿಟ್ಗೆ ಇಳಿದೆವು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಥಿತಿಯೂ ಇದೇ ಆಗಲಿದೆ ಎಂದು ವ್ಯಂಗ್ಯವಾಡಿದರು.
ಮೈತ್ರಿ ಮಾತುಕತೆಗೆ ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ಕರೆದಿಲ್ಲ. ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ ಎಂದು ಕರೆದಿಲ್ಲವೇ ಎಂದು ಟೀಕಿಸಿದರು. ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವ ಇದೆ. ಹಿಂದೆ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದಕ್ಕೆ ನನ್ನ ಒಪ್ಪಿಗೆ ಇರಲಿಲ್ಲ ಎಂದು ಹೇಳಿದ್ದ ಮಾಜಿ ಪ್ರಧಾನಿ ದೇವೇಗೌಡರು ಇದೀಗ ಏನು ಹೇಳುತ್ತಾರೆ. ಮೈತ್ರಿ ಬಗ್ಗೆ ಅವರು ಮೌನ ವಹಿಸಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಇದೀಗ ಕಾಂಗ್ರೆಸ್ ಪಕ್ಷ ಒಂದೇ ಜಾತ್ಯತೀತ ಎಂಬುದು ಸಾಬೀತಾಗಿದೆ. ಯಾವುದೇ ಸಿದ್ಧಾಂತ ಇಲ್ಲದ ಮೈತ್ರಿ ಎಂಬುದು ರಾಜ್ಯದ ಜನತೆಗೂ ಸ್ಪಷ್ಟತೆ ಸಿಕ್ಕಿದೆ. ಮೈತ್ರಿಯಿಂದ ಕಾಂಗ್ರೆಸ್ಗೆ ಲಾಭ ಆಗಲಿದೆ ಎಂದು ತಿಳಿಸಿದ್ದಾರೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ: ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ನಾವು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ. ವಿಧಾನಸಭೆ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಶೇ.45ರಷ್ಟು ಮತ ಪ್ರಮಾಣ ಗಳಿಸಿದ್ದೆವು. ಅದನ್ನು ಲೋಕಸಭೆ ಚುನಾವಣೆಯಲ್ಲೂ ಉಳಿಸುವ ಸಾಧ್ಯತೆ ಇದೆ. ಅದರಿಂದ ನಮಗೇನು ತೊಂದರೆ ಆಗಲ್ಲ. ಅವರು ಮೈತ್ರಿ ಮಾಡಿಕೊಳ್ಳಲಿ. ನಾವು 2019ರಲ್ಲಿ ಅವರ ಜೊತೆ ಮೈತ್ರಿ ಕೊಂಡಿದ್ದೆವು.
ಆಗ ಐದು ಸ್ಥಾನವನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟಿದ್ದೆವು. ಆದರೆ ಅಂತಿಮವಾಗಿ ಫಲಿತಾಂಶ ಏನು ಬಂದಿದೆ ಎಂದು ಗೊತ್ತಿದೆ. ಆ ಸಂದರ್ಭ ಮೈತ್ರಿ ಮಾಡಿಕೊಂಡಿದ್ದನ್ನು ಕಾಂಗ್ರೆಸ್ ಕಾರ್ಯಕರ್ತರು ಒಪ್ಪಿರಲಿಲ್ಲ. ಹೈ ಕಮಾಂಡ್ ತೀರ್ಮಾನ ಅಂತ ನಾವೆಲ್ಲ ಒಪ್ಪಿಕೊಂಡೆವು. ಈಗ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದೆ. ಅದರಿಂದ ನಮಗೇನು ಸಮಸ್ಯೆ ಆಗಲ್ಲ. ನೀವು ಜಾತ್ಯಾತೀತ ಜನತಾದಳ ಅಂತ ಹಾಕಿದ್ದೀರ. ಈಗ ಯಾವ ಜಾತ್ಯಾತೀತ ಅಂತ ಜನ ಕೇಳ್ತಾರೆ. ಉತ್ತರವನ್ನು ಅವರು ಕೊಡ್ತಾರೆ ಅಂತ ಅಂದುಕೊಳ್ಳುತ್ತೇನೆ ಎಂದು ಟೀಕಿಸಿದ್ದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ಯಾವುದೇ ತೊಂದರೆ ಇಲ್ಲ: ಸಚಿವ ಪರಮೇಶ್ವರ್