ಬೆಂಗಳೂರು: ಕೊರೊನಾ ವೈರಸ್ಗೆ ಹೊಂದಿಕೊಂಡು ಹಾಗೂ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕೈಗಾರಿಕೆಗಳನ್ನ ಪ್ರಾರಂಭಿಸಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿದರು.
ಬೆಂಗಳೂರಿನಲ್ಲಿ ಇಂದು ಎಫ್‌ಐಸಿಸಿಐ (ಫಿಕ್ಕಿ) ಆಯೋಜಿಸಿದ್ದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಮ್‌ಎಸ್‌ಎಂಇ ಹಾಗೂ ಕೈಗಾರಿಗಳ ಪುನಶ್ಚೇತನಕ್ಕೆ ಅಗತ್ಯವಿರುವ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ. ಕರ್ನಾಟಕ ಸರ್ಕಾರ ಲಾಕ್‌ಡೌನ್ ಪ್ರಾರಂಭವಾದ ಸಮಯದಿಂದಲೂ ಕೂಡಾ ಕೈಗಾರಿಕಾ ಸಂಘ ಸಂಸ್ಥೆಗಳ ಜೊತೆ ಸಂವಾದ ನಡೆಸುತ್ತಿದೆ ಎಂದರು.
ಅವರ ಕಷ್ಟಗಳನ್ನು ಅರಿತುಕೊಂಡು ಕೈಗಾರಿಕೆಗಳ ಪುನಶ್ಚೇತನಕ್ಕೆ ಅಗತ್ಯವಿರುವ ಕ್ರಮಗಳನ್ನು ಹಾಗೂ ಆದೇಶಗಳನ್ನು ನೀಡುತ್ತಾ ಬಂದಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಹಾಗೂ ಲಾಕ್‌ಡೌನ್ ಸಡಿಲಿಕೆಯ ನಂತರ ಬಹುತೇಕ ಕೈಗಾರಿಕೆಗಳು ಪ್ರಾರಂಭಿಸಲು ನಾವು ಅಗತ್ಯ ಸಹಕಾರ ನೀಡುತ್ತಾ ಬಂದಿದ್ದೇವೆ. ಕೇಂದ್ರ ಸರ್ಕಾರ ಈಗಾಗಾಲೇ ಐತಿಹಾಸಿಕ ಪ್ಯಾಕೇಜ್ ಘೋಷಣೆ ಮಾಡಿದೆ. ಅಲ್ಲದೇ, ರಾಜ್ಯ ಸರ್ಕಾರ ಕೂಡಾ ಎಮ್‌ಎಸ್‌ಎಂಇ ಗಳ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಿಸಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ನಮ್ಮ ಮುಂದಿನ ಗುರಿಗಳನ್ನು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯವಾಗಿ ಉತ್ಪಾದನೆ ಮಾಡುವ ಹಾಗೂ ಹೊಸತನಕ್ಕೆ ತೆರೆದುಕೊಳ್ಳುವ ಮೂಲಕ ಹೊಸದನ್ನು ಸಾಧಿಸಬೇಕಾಗಿದೆ. ಇದೇ ವೇಳೆ ಲಾಕ್ಡೌನ್ನಿಂದ ಆಗಿರುವ ನೂತನ ಸಾಮಾನ್ಯ ಪರಿಸ್ಥಿತಿಗೆ ನಾವು ಹೊಂದಿಕೊಳ್ಳಬೇಕಾಗಿದೆ. ಈ ಸಂಕಷ್ಟದ ಸಮಯವನ್ನು ಸಾಧನೆಯ ಮೆಟ್ಟಿಲಾಗಿ ಪರಿವರ್ತಿಸಿಕೊಳ್ಳಬೇಕಾಗಿದೆ. ಕೈಗಾರಿಕೋದ್ಯಮಿಗಳು ತಮ್ಮನ್ನ ತಾವು ಈ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿಸಿಕೊಳ್ಳಬೇಕು. ಕೈಗಾರಿಕೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಹಾಗೂ ತಮ್ಮ ಕೈಗಾರಿಕೆಗಳನ್ನು ಪ್ರಾರಂಭಿಸಿ ದೇಶದ ಆರ್ಥಿಕತೆ ಪುನಶ್ಚೇತನಗೊಳ್ಳಲು ತಮ್ಮ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಮಾತನಾಡಿ, ರಾಜ್ಯ ಸರ್ಕಾರ ಕೈಗಾರಿಕಾ ಕ್ಷೇತ್ರ ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ದವಿದೆ ಎಂದರು. ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು 100ರಷ್ಟು ಮಾನವ ಸಂಪನ್ಮೂಲ ಬಳಸಿಕೊಂಡು ಕೈಗಾರಿಕೆಗಳನ್ನು ನಡೆಸಲು ಯಾವುದೇ ಅಡೆತಡೆ ಇಲ್ಲ ಎಂದರು.