ಬೆಂಗಳೂರು: ಕೋವಿಡ್ ನಿಯಂತ್ರಣ ವಿಷಯದಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳು ಸಮಾಧಾನಕರವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಸಡಿಲಿಕೆ ಬಳಿಕ ಹೆಚ್ಚಳವಾಗಿದ್ದ ಸೋಂಕು ಮತ್ತು ಸಾವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದು ಸಮಾಧಾನಕರ ಸಂಗತಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳ ಮೂಲಕ ಸಂಪೂರ್ಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಕೋವಿಡ್ ಹೆಚ್ಚಾಗಿರುವ ಬೆಂಗಳೂರು ನಗರ, ಬೆಳಗಾವಿ, ಮೈಸೂರಿನಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸುವಂತೆ ಸಲಹೆ ನೀಡಿದರು.
ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಹಾಗೂ ವ್ಯಾಕ್ಸಿನ್ ವಿತರಣೆಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಮುಂಬರುವ ಚಳಿಗಾಲ ಮತ್ತು ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕಾರ್ಯತಂತ್ರ ರೂಪಿಸಬೇಕು. ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ಪ್ರಯಾಣಿಕರ ಮೇಲೆ ನಿಗಾ ವಹಿಸಬೇಕು. ಹಾಗೆಯೇ ಐಎಲ್ಐ ಮತ್ತು ಸಾರಿ ಪ್ರಕರಣಗಳನ್ನು ಪತ್ತೆ ಹಚ್ಚಿ ಟೆಸ್ಟ್ಗೆ ಒಳಪಡಿಸಿ ಸೋಂಕಿನ ಹರಡುವಿಕೆ ನಿಯಂತ್ರಿಸಬೇಕು. ವ್ಯಾಕ್ಸಿನ್ ವಿಷಯದಲ್ಲಿ ಈಗಾಗಲೇ ಕೆಲ ಸೂಚನೆ ನೀಡಲಾಗಿದೆ. ಆ ಬಗ್ಗೆಯೂ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.
ಸಚಿವ ಸುಧಾಕರ್ ಹೇಳಿದ್ದೇನು?:
ಲಾಕ್ಡೌನ್ಗೆ ಮುಂಚೆ ಉತ್ತಮವಾಗಿ ನಿಯಂತ್ರಣದಲ್ಲಿದ್ದ ಕೋವಿಡ್ ಬಳಿಕ ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ಪ್ರಯಾಣಿಕರು ಮತ್ತು ನೆರೆಯ ಐದು ರಾಜ್ಯಗಳ ಸಂಚಾರ ಸಂಪರ್ಕದಿಂದ ಹೆಚ್ಚಳವಾಯಿತು. ಆದರೂ ಕಟ್ಟುನಿಟ್ಟಿನ ಕ್ರಮ ಮತ್ತು ಟೆಸ್ಟ್ ಸಂಖ್ಯೆ ಹೆಚ್ಚಳದ ಮೂಲಕ ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಮರಣ ಪ್ರಮಾಣವನ್ನು ಶೇಕಡಾ ಒಂದಕ್ಕಿಂತ ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಡಾ. ಕೆ.ಸುಧಾಕರ್ ತಿಳಿಸಿದರು.
ಮುಂದಿನ ಚಳಿಗಾಲ ಮತ್ತು ಹಬ್ಬದ ದಿನಗಳಲ್ಲಿ ನಮ್ಮ ಕಾರ್ಯತಂತ್ರದಲ್ಲಿ ರಾಜಿ ಮಾಡಿಕೊಳ್ಳದೆ ಎಚ್ಚರಿಕೆಯಿಂದ ಮುಂದುವರೆಯಲಾಗುವುದು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮಹತ್ವದ ಸಂಗತಿಯಾಗಿದೆ. ಆ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದರು.
ಹಲವು ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದಲ್ಲಿ ನಡೆಸಿರುವ ಸೆರೋ ಸಮೀಕ್ಷೆಯಿಂದ ಕೂಡ ನಮಗೆ ಮುಂದೆ ಅಳವಡಿಸಿಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದೇ ದಿನ ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ದಸರಾ ಮಹೋತ್ಸವ ಸಂದರ್ಭದಲ್ಲಿ ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಮುಂದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೂಡ ನಿರ್ಬಂಧಗಳನ್ನು ಸಡಿಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿರುವ ಕೇಂದ್ರದ ಕೆಲ ಲ್ಯಾಬ್ಗಳಲ್ಲಿ ಟೆಸ್ಟ್ಗಳ ಸಂಖ್ಯೆ ಹೆಚ್ಚಿಸಲು ಸೂಚನೆ ನೀಡಬೇಕು. ಆರ್ಟಿಪಿಸಿಆರ್ ಕಿಟ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಬೇಕು ಮತ್ತು ಆಕ್ಸಿಜನ್ ಪ್ಲಾಂಟ್ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಮನವಿ ಮಾಡಿದರು.