ಬೆಂಗಳೂರು: ಆಧ್ಯಾತ್ಮದ ಮೂಲಕ ಇಂದು ಸಮಾಜದಲ್ಲಿ ನಿಸ್ವಾರ್ಥ ಗುಣಗಳನ್ನ ಬೆಳೆಸುವತ್ತ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನ ಗೋವರ್ಧನ ಕ್ಷೇತ್ರದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಗಳ ಚಾತುರ್ಮಾಸ್ಯ ವ್ರತದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾಮೀಜಿಗಳಲ್ಲಿ ಸುಗುಣೇಂದ್ರತೀರ್ಥರು ವಿಶಿಷ್ಟ ಶ್ರೀಗಳು. ಹಿಂದು ಧರ್ಮದ ಪ್ರತಿಪಾದಕರಾಗಿ ದೇಶಾದ್ಯಂತ ದೊಡ್ಡ ಸಭೆಗಳಲ್ಲಿ ಪಾಲ್ಗೊಂಡು ಸದ್ಬಾವನೆ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಒಳ್ಳೆಯ ಕೆಲಸಗಳನ್ನ ಮಾಡಲು ಧರ್ಮ ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ಸಮಾಜದಲ್ಲಿ ಸದ್ಬಾವನೆ ಮೂಡಿಸುವುದು ಬಹುಮುಖ್ಯ. ಪುತ್ತಿಗೆ ಶ್ರೀಗಳ ಕೋಟಿ ಗೀತಾ ಲೇಖನ ಯಜ್ಞ ಕಾರ್ಯಕ್ರಮ ಸಾಕಷ್ಟು ಜನರನ್ನ ಆಕರ್ಷಿಸಿದೆ. ನಮ್ಮ ಧರ್ಮ ಸಂಸ್ಕೃತಿ ಬಗ್ಗೆ ಇನ್ನಷ್ಟು ಆಳವಾಗಿ ಅಧ್ಯಯನ ಮಾಡಲು ಈ ಕಾರ್ಯಕ್ರಮ ಸಹಕಾರಿಯಾಗಲಿ ಎಂದು ಹೇಳಿದರು.

ದಕ್ಷಣ ಭಾರತದ ಪ್ರವಾಸದ ಬಳಿಕ ಜನವರಿ 18 ರಂದು ಪರ್ಯಾಯಕ್ಕೆ ಶ್ರೀಗಳು ಪಾದರ್ಪಣೆ ಮಾಡುತ್ತಿದ್ದಾರೆ. ಇದು ಅವರ ಭಕ್ತ ವೃಂದದಲ್ಲಿ ಸಂತಸದ ವಿಷಯವಾಗಿದೆ. ನಾನು ಕೂಡಾ ಪರ್ಯಾಯ ಪೂಜಾ ಕಾರ್ಯಕ್ರಮದಲ್ಲಿ ಭಗವಹಿಸುತ್ತೇನೆ. ಪರ್ಯಾಯ ಪೀಠವನ್ನು ಶ್ರೀಗಳು ಅಲಂಕರಿಸುವುದನ್ನ ನೋಡಲು ನಾನು ಬಯಸುತ್ತೇನೆ ಎಂದು ಅಭಿಲಾಶೆ ವ್ಯಕ್ತಪಡಿಸಿದರು. ಸಚಿವರನ್ನ ಆಶೀರ್ವದಿಸಿದ ಸುಗುಣೇಂದ್ರತೀರ್ಥ ಶ್ರೀಗಳು ಆರೋಗ್ಯ ಸಚಿವರಾಗಿ ದಿನೇಶ್ ಗುಂಡೂರಾವ್ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಶ್ರಮ ವಹಿಸುತ್ತಿದ್ದಾರೆ. ಇನ್ನು ಒಳ್ಳೆಯ ಕೆಲಸಗಳನ್ನ ಮಾಡಲು ಅವರಿಗೆ ಭಗವಂತ ಹೆಚ್ಚು ಶಕ್ತಿ ನೀಡಲಿ ಎಂದು ಆಶೀರ್ವದಿಸಿದರು.

ಗಣೇಶ ಹಬ್ಬ ಸಂಘಟನೆ ಮತ್ತು ಹೋರಾಟಕ್ಕೆ ಸ್ಪೂರ್ತಿಯಾಗಿದೆ - ಸುರೇಶ್ ಕುಮಾರ್: ಮತ್ತೊಂದೆಡೆ, ಬೆಂಗಳೂರು ನಗರದ ರಾಜಾಜಿನಗರ ಶ್ರೀರಾಮಮಂದಿರ ಬಳಿ ಹಿಂದೂ ಸಾಂಸ್ಕೃತಿಕ ಸಂಘದ ವತಿಯಿಂದ ಬಾಲಗಂಗಾಧರ ತಿಲಕ್ ಮಂಟಪದಲ್ಲಿ ಶ್ರೀ ಮಹಾಗಣಪತಿ ಪ್ರತಿಷ್ಟಾಪನೆ ಮತ್ತು ರಂಗೋಲಿ ಸ್ಪರ್ಧೆ ಪ್ರಸಾದ ವಿನಿಯೋಗ ಕಾರ್ಯಕ್ರಮ ಭಾನುವಾರ ಜರುಗಿತು. ಮಾಜಿ ಸಚಿವ, ರಾಜಾಜಿನಗರ ಶಾಸಕ ಎಸ್ ಸುರೇಶ್ ಕುಮಾರ್ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ವಿನಿಯೋಗ ನೆರವೇರಿಸಿ, ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ಮಾತನಾಡಿ, ಬ್ರಿಟಿಷರ ವಿರುದ್ಧ ಸಂಘಟಿತ ಹೋರಾಟ ಮಾಡಲು ಬಾಲಗಂಗಾಧರ ತಿಲಕ್ ಸಾರ್ವಜನಿಕ ಗಣೇಶ ಹಬ್ಬಕ್ಕೆ ಚಾಲನೆ ನೀಡಿದರು. ಯಾವುದೇ ಶುಭಾ ಕಾರ್ಯಗಳಿಗೆ ಗಣೇಶನಿಗೆ ಪ್ರಥಮ ಪೂಜೆ ಸಲ್ಲಿಸುವ ಸಂಪ್ರಾದಯ ನಮ್ಮಲಿದೆ. ಈ ಅಗೋಚರ ಶಕ್ತಿಯು ನಮ್ಮ ಯಶ್ವಸಿಗೆ ಕಾರಣವಾಗಿದೆ ಎಂದು ನುಡಿದರು. ಗಣಪನ ಕೃಪಾ ಕಟಾಕ್ಷದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅತ್ಯಂತ ಯಶ್ವಸಿಯಾಗಿ ಸಾಗುತ್ತಿದೆ, ವಿಶ್ವದ ಕ್ರಮಾಂಕದಲ್ಲಿ 5ನೇ ಬಲಿಷ್ಠ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಂದ್ರಯಾನ -3 ಅತ್ಯಂತ ಯಶಸ್ವಿಯಾಗಿ ಚಂದ್ರಮಂಡಲ ತಲುಪಿ, ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಬಿಜೆಪಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಪಾಳು ಎಂಬಂತೆ ರಾಜಕೀಯ ಕ್ಷೇತ್ರದಲ್ಲಿ ಶೇಕಡ 33ರಷ್ಟು ಮಹಿಳಾ ಮೀಸಲಾತಿ ನೀಡಿರುವುದು ಸಂತೋಷದಾಯಕ ವಿಷಯವಾಗಿದೆ. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಸುಖ, ಶಾಂತಿ ನೆಮ್ಮದಿ ಲಭಿಸಲಿ ಎಂದು ವಿಘ್ನವಿನಾಯಕನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಮೊಬೈಲ್ ಬಿಡಿ, ಪುಸ್ತಕ ಹಿಡಿರಿ : ಬೆಳಗಾವಿ ಗಣಪನ ಶೈಕ್ಷಣಿಕ ಕಾಳಜಿ