ಬೆಂಗಳೂರು: ರಾಜ್ಯ ಸರಕಾರದ ಯಾವುದೇ ಆಸ್ಪತ್ರೆಗಳಲ್ಲಿ ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷತನದಿಂದ ರೋಗಿಗಳ ಸಾವು - ನೋವು ಸಂಭವಿಸಿದರೆ ತಾವು ಸಹಿಸುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಸೌಧದಲ್ಲಿಂದ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಹಿರಿಯ ಆರೋಗ್ಯ ಅಧಿಕಾರಿಗಳ ಸಭೆ ನಡೆಸಿ ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಚಿಕಿತ್ಸೆ ಬಗ್ಗೆ ತಮ್ಮ ಸರಕಾರದ ಆದ್ಯತೆಗಳನ್ನು ತಿಳಿಸಿಕೊಟ್ಟರು. ಎಲ್ಲ ರೋಗಿಗಳಿಗೆ ಮಾನವೀಯ ದೃಷ್ಠಿಕೋನದಿಂದ ಚಿಕಿತ್ಸೆ ನೀಡಬೇಕು. ಕರ್ತವ್ಯದ ಸಂದರ್ಭದಲ್ಲಿ ನಿರ್ಲಕ್ಷತನದಿಂದ ರೋಗಿಗಳಿಗೆ ತೊಂದರೆ ಆದರೆ ಕ್ಷಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆರೋಗ್ಯ ಇಲಾಖೆ ಸಾರ್ವಜನಿಕ ವಲಯದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ಮತ್ತು ಸೂಕ್ಷ್ಮತೆ ಹೊಂದಿರುವ ಇಲಾಖೆ. ಇಲ್ಲಿ ತುರ್ತಾಗಿ ರೋಗಿಗಳಿಗೆ ಸ್ಪಂದನೆ ಸಿಗಬೇಕು. ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿಯಿಂದಾಗುವ ಕೆಲವು ತಪ್ಪುಗಳಿಂದ ರೋಗಿಗಳಿಗೆ ಸಮಸ್ಯೆಗಳಾಗುವುದನ್ನು ನಾವು ನೋಡುತ್ತಿರುತ್ತೇವೆ. ಈ ಬಗ್ಗೆ ಜಾಗ್ರತೆಯಿಂದ ಇರಬೇಕೆಂದು ಸಚಿವ ಗೂಂಡುರಾವ್ ಹೇಳಿದರು. ತಪ್ಪುಗಳನ್ನು ಸರಿಪಡಿಸೋಣ. ಆದರೆ, ಚಿಕಿತ್ಸೆ ವೇಳೆ ನಿರ್ಲಕ್ಷ್ಯ ತೋರಬಾರದು. ಇದು ಅಕ್ಷಮ್ಯ. ಆ ರೀತಿಯ ಪ್ರಕರಣಗಳು ಕಂಡು ಬಂದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಚಿವರು ಅಧಿಕಾರಿಗಳಿಗೆ ನೀಡಿದ್ದಾರೆ.
ಚಿಕಿತ್ಸೆ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಂಡ ಬಳಿಕ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡ ಹಾಕಿದರೆ ಅದಕ್ಕೆ ತಾವು ಮಣಿಯುವುದಿಲ್ಲ ಎಂದು ಸಚಿವರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಸಾರ್ವಜನಿಕರಿಗೆ ಪಬ್ಲಿಕ್ ರಿಲೇಷನ್ ಆಫೀಸರ್ ರೀತಿಯಲ್ಲೂ ಕೆಲಸ ಮಾಡಬೇಕು. ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಬೇಕು. ನೀವೇ ನಿರ್ಲಕ್ಷ್ಯ, ಉದಾಸೀನ ಮಾಡಿದರೆ ರೋಗಿಗಳಿಗೆ ನೆಮ್ಮದಿಯೇ ಇಲ್ಲದಂತಾಗುತ್ತದೆ ಎಂದು ತಿಳಿಸಿದರು.
ಸರಕಾರಿ ಆಸ್ಪತ್ರೆ ಬಗ್ಗೆ ಮಾಹಿತಿ ಸಂಗ್ರಹ : ರಾಜ್ಯಾದ್ಯಂತ ಬೇರೆ ಬೇರೆ ಪ್ರಾದೇಶಿಕ ವಿಭಾಗಗಳಲ್ಲಿ ಪ್ರವಾಸ ಮಾಡುವುದಾಗಿ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದ ಸಚಿವ ದಿನೇಶ್ ಗುಂಡೂರಾವ್, ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತೇನೆ ಎಂದರು. ಆಸ್ಪತ್ರೆಗಳಲ್ಲಿ ಅಧಿಕಾರಿಗಳು ಸಾರ್ವಜನಿಕರಿಂದ ಒಳ್ಳೆಯ ಹೆಸರು ಪಡೆಯುವಂತೆ ಕೆಲಸ ಮಾಡಬೇಕು. ಯಾರು ಒಳ್ಳೆಯ ಕೆಲಸ ಮಾಡ್ತಾರೆ ಅವರ ಪರ ನಾನು ಇರುತ್ತೇನೆ. ಸರ್ಕಾರದಿಂದ ಕೂಡ ಸಂಪೂರ್ಣ ಸಹಕಾರ ಕೊಡಿಸುವ ಭರವಸೆಯನ್ನು ಇದೇ ವೇಳೆ ಸಚಿವರು ಅಧಿಕಾರಿಗಳಿಗೆ ನೀಡಿದರು.
ಜಿಲ್ಲಾವಾರು ಪ್ರತಿಯೊಬ್ಬ ಡಿಎಚ್ಒಗಳ ಕಾರ್ಯ ಸಾಮರ್ಥ್ಯದ ವರದಿ ನೀಡುವಂತೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲಾವಾರು ಸರ್ಕಾರಿ ಆಸ್ಪತ್ರೆಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿದೆ. ಎಷ್ಟು ಪ್ರಗತಿ ಕಂಡಿದ್ದೇವೆ. ಎಲ್ಲಾ ಮಾಹಿತಿಗಳನ್ನು ನೀಡುವಂತೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆಲ್ತ್ ಮಿಷನ್ನ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಗುಂಡೂರಾವ್, ಡಯಾಬಿಟೀಸ್ ಸಮೀಕ್ಷಾ ವರದಿಗಳ ಕುರಿತು ಚರ್ಚೆ ನಡೆಸಿದರು. ಹಲವು ಜಿಲ್ಲೆಗಳಲ್ಲಿ ಡಯಾಬಿಟಿಸ್ 1 ರಿಂದ 2 ಪರ್ಸೆಂಟ್ ಇದೆ ಎಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಝೀರೋ ಪರ್ಸೆಂಟ್ ಅಂತಾ ವರದಿ ನೀಡಿದ್ದಾರೆ. ಆದರೆ, ಯಾದಗಿರಿ ಡಿಎಚ್ಒ ಅವರಿಗೆ ಡಯಾಬಿಟೀಸ್ ಇದ್ದ ಹಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಎಲ್ಲರೂ ಕ್ರಿಯೇಟಿವ್ ಆಗಿ, ಉತ್ತಮವಾಗಿ ಕೆಲಸ ಮಾಡಿ. ಸಾರ್ವಜನಿಕರಿಗೆ ನೀವು ಒಳ್ಳೆಯದನ್ನು ಮಾಡಿದರೆ, ನಿಮಗೂ ಒಳ್ಳೆಯದಾಗಲಿದೆ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಕಚೇರಿಗಳಲ್ಲಿ ಧಾರ್ಮಿಕ ಆಚರಣೆ ಸರ್ಕಾರದ ಬ್ಲೂ ಬುಕ್ನಲ್ಲಿರುವಂತೆ ಜಾರಿ: ಡಾ.ಜಿ.ಪರಮೇಶ್ವರ್