ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ರಾಜ್ಯೋತ್ಸವ ಆಚರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಯೋಗ್ಯತೆ ಇರುವ ಕೆಲವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಸಾಧ್ಯವಾಗಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ರಾಜ್ಯೋತ್ಸವ ಪಟ್ಟಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಈ ಹಿಂದೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ನೀಡಿದ ಶಿಫಾರಸ್ಸಿನ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಅದರಂತೆ ಪ್ರತಿ ಜಿಲ್ಲೆಗೆ ಕನಿಷ್ಠ ಒಬ್ಬರನ್ನು ಪರಿಗಣಿಸಲಾಗಿದೆ. ಕ್ರೀಡಾ ಕ್ಷೇತ್ರ ಹೊರತುಪಡಿಸಿ ಉಳಿದವರು 60 ವರ್ಷ ಮೇಲ್ಪಟ್ಟವರಿದ್ದಾರೆ.
ಸಾಮಾಜಿಕ ನ್ಯಾಯ, ವೈವಿದ್ಯತೆಗೆ ಆದ್ಯತೆ ನೀಡಲಾಗಿದೆ. ಕೃಷಿ, ಶಿಕ್ಷಣ, ಸಮಾಜಸೇವೆ ಸೇರಿದಂತೆ ವೈವಿಧ್ಯತೆಯ ನ್ಯಾಯ ಪ್ರಾದೇಶಿಕ ನ್ಯಾಯ ಒದಗಿಸಲಾಗಿದೆ. ಪ್ರಶಸ್ತಿಗಾಗಿ ಬಂದಿದ್ದ 1,788 ಅರ್ಜಿಗಳ ಪರಿಶೀಲನೆ ನಡೆಸಲಾಗಿತ್ತು. ಅವುಗಳನ್ನು 130ಕ್ಕೆ ಇಳಿಸಿ, ಸಿಎಂ ಸಮಿತಿಗೆ ನೀಡಲಾಗಿತ್ತು.
ಬೆಂಗಳೂರು ಜನಸಂಖ್ಯೆ ಹಾಗೂ ಜನ ಸಾಂದ್ರತೆಯಲ್ಲಿ ಹೆಚ್ಚಿರುವುದರಿಂದ ಸಿಂಹ ಪಾಲಿದೆ. ಯಾವುದೇ ಅರ್ಜಿ ಹಾಕದವರನ್ನೂ ಹುಡುಕಿ ಪ್ರಶಸ್ತಿ ನೀಡುವ ಕೆಲಸ ಮಾಡಲಾಗಿದೆ. ಅರ್ಹತೆಯನ್ನು ಕಡೆಗಣಿಸಿಲ್ಲ. ಶಿಫಾರಸ್ಸಿಗಿಂತ ಅರ್ಹತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಹೀಗಾಗಿ, ಬಹಳ ಜನರಿಗೆ ಅರ್ಹತೆ ಇದ್ದರೂ ಆಯ್ಕೆಯಾಗಲು ಸಾಧ್ಯವಾಗಿಲ್ಲ. ನ್ಯಾಯಾಲಯಕ್ಕೆ ಹೋಗಿ ಅರ್ಹತೆಯನ್ನು ಓರೆಗೆ ಹಚ್ಚಿದವರಿಗೂ ಪ್ರಶಸ್ತಿ ನೀಡಲು ಆಗಿಲ್ಲವೆಂದು ಈ ವೇಳೆ ಸ್ಪಷ್ಟನೆ ನೀಡಿದ್ದಾರೆ.
ನವೆಂಬರ್ 7ರಂದು ಬೆಳಗ್ಗೆ 11ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಸರಳ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ. ಪ್ರಶಸ್ತಿ 1 ಲಕ್ಷ ರೂ. 25 ಗ್ರಾಂ ಚಿನ್ನ ನೀಡಲಾಗುತ್ತದೆ ಎಂದು ಈ ವೇಳೆ ಮಾಹಿತಿ ನೀಡಿದರು.