ಬೆಂಗಳೂರು: ಒಂದು ಘಟನೆಯನ್ನು ಆಧಾರವಾಗಿಟ್ಟುಕೊಂಡು ಸಂಘಟನೆಯೊಂದನ್ನು ನಿಷೇಧಿಸಲು ಸಾಧ್ಯವಿಲ್ಲ. ಹಿಂದಿನ ಘಟನೆಗಳ ಬಗ್ಗೆಯೂ ಸಾಕ್ಷ್ಯಾಧಾರ ಕಲೆ ಹಾಕಲಾಗುತ್ತಿದ್ದು, ಸಾಕ್ಷಿಗಳ ಆಧಾರದಲ್ಲಿ ಸಂಘಟನೆಗಳ ನಿಷೇಧದ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಲ ಸಂಘಟನೆಗಳ ನಿಷೇಧ ವಿಚಾರ ತೀವ್ರ ಚರ್ಚೆಯಾಗುತ್ತಿದೆ. ಒಂದು ಘಟನೆಯ ಆಧಾರದ ಮೇಲೆ ಇದನ್ನು ನಿರ್ಧಾರ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ಹಿಂದೆ ನಡೆದಿರುವ ಹಲವಾರು ಸಮಾಜಘಾತುಕ ಘಟನೆಗಳ ಬಗ್ಗೆ ಕೂಡ ಸಾಕ್ಷ್ಯಾಧಾರ ಕಲೆ ಹಾಕುವ ಕೆಲಸ ನಡೆಯುತ್ತಿದೆ. ಯಾವುದೇ ಸಮಾಜಘಾತಕ ಶಕ್ತಿಗಳನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಮುಂದೆ ಕೋರ್ಟ್ನಲ್ಲೂ ಕೂಡ ಇದಕ್ಕೆಲ್ಲಾ ಉತ್ತರ ಹೇಳಬೇಕಾದ ಸಂದರ್ಭ ಬರಬಹುದು. ಹಾಗಾಗಿ ನಿಷೇಧದಂತಹ ಕ್ರಮಕ್ಕೂ ಮುನ್ನ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದರು.
ಕೆಲವರು ರಾಜಕೀಯ ಕಾರಣಗಳಿಗಾಗಿ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದ್ದೇನೆ. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಅನ್ನೋ ಹಾಗೆ ಮಾತನಾಡುತ್ತಿದ್ದಾರೆ. ಇನ್ನಾದರೂ ಕಾಂಗ್ರೆಸ್ ನಾಯಕರು ತಮ್ಮ ವೋಟ್ ಬ್ಯಾಂಕ್ ರಾಜಕೀಯವನ್ನು ಬಿಡಬೇಕು ಎಂದರು.
ದೆಹಲಿ ಭೇಟಿ ಫಲಪ್ರದ : ದೆಹಲಿ ಭೇಟಿ ಬಹಳ ಫಲಪ್ರದವಾಗಿದೆ. ನಾನು ಅಂದುಕೊಂಡ ಎಲ್ಲಾ ಕೆಲಸಗಳು ಆಗಿವೆ ಎಂದು ತಮ್ಮ ದೆಹಲಿ ಭೇಟಿ ಬಗ್ಗೆ ಸಚಿವ ಸಿ.ಟಿ ರವಿ ಹೇಳಿದರು. ಕೇಂದ್ರ ಸಚಿವರಾದ ಡಿ.ವಿ ಸದಾನಂದಗೌಡ ಮತ್ತು ಪ್ರಹ್ಲಾದ್ ಜೋಶಿ ಬಹಳ ಸಹಕಾರ ಕೊಟ್ಟಿದ್ದಾರೆ. ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಬೆಳೆಗಾರರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೂಡ ಸಂಬಂಧಪಟ್ಟ ಇಲಾಖೆಗಳ ಸಚಿವರುಗಳ ಜೊತೆ ಚರ್ಚೆ ಮಾಡಿದ್ದೇನೆ, ಸೂಕ್ತ ಸಹಕಾರದ ಭರವಸೆಯೂ ಸಿಕ್ಕಿದೆ ಎಂದರು.