ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ವೇಗ ನೀಡಲು ಹಾಗೂ ಹೆಲಿ ಟೂರಿಸಂ, ಸೀ ಪ್ಲೇನ್ ಮತ್ತು ರಾಜ್ಯದ ಜಲಾಶಯಗಳು ಮತ್ತು ನದಿಗಳಲ್ಲಿ ಜಲ ಕ್ರೀಡೆಗಳನ್ನು ಆರಂಭಿಸುವ ಯೋಜನೆಗಳನ್ನು ನಿಗಧಿತ ಸಮಯದಲ್ಲಿ ಪೂರ್ಣಗೊಳಿಸುವ ಸಂಬಂಧ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ. ಯೋಗೇಶ್ವರ್ ಹಿರಿಯ ಅಧಿಕಾರಿಗಳ ಜೊತೆ ಇಂದು ಮಹತ್ವದ ಸಭೆ ನಡೆಸಿದರು.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಸಿಂಧು ಬಿ. ರೂಪೇಶ್, ಕೆ.ಎಸ್.ಟಿ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ವಿಜಯ್ ಶರ್ಮ, ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕುಮಾರ್ ಪುಷ್ಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: ಬಿಬಿಎಂಪಿಗೆ ನೂತನ ಸಾರಥಿ: ಮುಖ್ಯ ಆಯುಕ್ತರಾಗಿ ಗೌರವ್ ಗುಪ್ತಾ ಪದಗ್ರಹಣ
ಕೊರೊನಾದಿಂದ ತತ್ತರಿಸಿರುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪುನಶ್ಚೇತನ ನೀಡಲು ಹಾಗೂ ಪ್ರವಾಸಿಗರಿಗೆ ಹೊಸ ಬಗೆಯ ಅನುಕೂಲಗಳನ್ನು ಕಲ್ಪಿಸಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಹೆಲಿಪೋರ್ಟ್ ಹಾಗೂ ಹೆಲಿಪ್ಯಾಡ್ಗಳ ನಿರ್ಮಾಣ :
ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿ ಹಾಗೂ ಬಳ್ಳಾರಿಯ ಹಂಪಿಯಲ್ಲಿ ಹೆಲಿ ಪೋರ್ಟ್ಗಳನ್ನು ನಿರ್ಮಾಣ ಮಾಡುವ ಸಂಬಂಧ ಚರ್ಚಿಸಲಾಯಿತು. ಪ್ರಥಮ ಹಂತದಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಎಲ್ಲೆಡೆ 50 ಹೆಲಿಪ್ಯಾಡ್ಗಳನ್ನು ಎರಡನೇ ಹಂತದಲ್ಲಿ, 50 ಹೆಲಿ ಪ್ಯಾಡ್ಗಳನ್ನು ಸೇರಿದಂತೆ ಒಟ್ಟು 100 ಹೆಲಿ ಪ್ಯಾಡ್ ಗಳನ್ನು ನಿರ್ಮಾಣ ಮಾಡಲು ಸಹ ಕ್ರಿಯಾ ಯೋಜನೆಗಳನ್ನು ರೂಪಿಸಲಾಯಿತು. ಪ್ರವಾಸಿಗರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೆಲಿಕಾಪ್ಟರ್ ಪ್ರಯಾಣ ಸೌಲಭ್ಯ ಒದಗಿಸಲು ಹೆಚ್.ಎ.ಎಲ್. ಸೇರಿದಂತೆ ಖಾಸಗಿ ಹೆಲಿಕಾಪ್ಟರ್ ಸಂಸ್ಥೆಗಳ ಜೊತೆ ಚರ್ಚಿಸಲು ನಿರ್ಧಾರ ಕೈಗೊಳ್ಳಲಾಯಿತು.
ಹೆಚ್ಚಿನ ಸಂಖ್ಯೆ ಪ್ರವಾಸಿಗರನ್ನು ಕರ್ನಾಟಕಕ್ಕೆ ಆಕರ್ಷಿಸಲು ನೆರೆಯ ಗೋವಾ ಹಾಗೂ ಕೇರಳ ರಾಜ್ಯಗಳ ಜೊತೆ ಪ್ರವಾಸೋದ್ಯಮ ಸಂಪರ್ಕದ ಬಗ್ಗೆ ಒಡಂಬಡಿಕೆ ಮಾಡಿಕೊಳ್ಳಲು ಸಹ ನಿರ್ಧರಿಸಲಾಯಿತು. ಇಡೀ ದಕ್ಷಿಣ ಭಾರತದ ಪ್ರವಾಸಿ ಸ್ಥಳಗಳನ್ನು ನೋಡಲು ಅನುಕೂಲವಾಗುವಂತೆ ಒಂದು ಪ್ರವಾಸೋದ್ಯಮ ಸರ್ಕ್ಯೂಟ್ ರಚನೆ ಮಾಡುವ ಬಗ್ಗೆ ನೆರೆಯ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಜೊತೆ ಚರ್ಚಿಸಲು ನಿರ್ಧರಿಸಲಾಯಿತು.
ಉಡಾನ್ ಯೋಜನೆಯಲ್ಲಿ - ಸೀ ಪ್ಲೇನ್:
ಕೇಂದ್ರ ಸರ್ಕಾರದ ಮಹತ್ವದ ಉಡಾನ್ ಯೋಜನೆಯಲ್ಲಿ ಸೀ ಪ್ಲೇನ್ ಪ್ರವಾಸೋದ್ಯಮ ಆರಂಭಿಸಲು ರಾಜ್ಯದ ಕರಾವಳಿ ತೀರದಲ್ಲಿರುವ ಅವಕಾಶಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು. ಗುಜರಾತ್ ರಾಜ್ಯದಲ್ಲಿ ಪ್ರವಾಸಿಗರಿಗೆ ಸೀ ಪ್ಲೇನ್ ಸೇವೆ ಒದಗಿಸಲಾಗಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಸೀ ಪ್ಲೇನ್ ಸೌಲಭ್ಯ ಕಲ್ಪಿಸಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ತುಂಗಭದ್ರ ಜಲಾಶಯ, ಆಲಮಟ್ಟಿ ಜಲಾಶಯ ಹಾಗೂ ಶಿವಮೊಗ್ಗದ ಜೋಗ್ ಫಾಲ್ಸ್ ಕೇಂದ್ರವಾಗಿಟ್ಟುಕೊಂಡು ಸೀ ಪ್ಲೇನ್ ಪ್ರವಾಸೋದ್ಯಮ ಯೋಜನೆ ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಮುಖ ಜಲಾಶಯಗಳು ಹಾಗೂ ನದಿಗಳಲ್ಲಿ ಜಲಕ್ರೀಡೆ:
ರಾಜ್ಯದ ಎಲ್ಲಾ ಜಲಾಶಯಗಳು, ಪ್ರಮುಖ ನದಿಗಳು ಹಾಗೂ ಕರಾವಳಿ ತೀರದಲ್ಲಿ ಜಲ ಕ್ರೀಡೆಗಳನ್ನು ಆರಂಭಿಸಲು ಕ್ರಿಯಾ ಯೋಜನೆ ರೂಪಿಸಲಾಯಿತು. ದೋಣಿ ವಿಹಾರ, ಸರ್ಫಿಂಗ್ ಸೇರಿದಂತೆ ರೋಮಾಂಚಕಾರಿ ಜಲಕ್ರೀಡೆಗಳನ್ನ ಆರಂಭಿಸಲು ತೀರ್ಮಾನಿಸಲಾಗಿದೆ.
ರಾಜ್ಯದ 6 ಐತಿಹಾಸಿಕ ಬೆಟ್ಟಗಳಿಗೆ ರೋಪ್ ವೇ ನಿರ್ಮಾಣ:
ನಂದಿ ಬೆಟ್ಟ, ಮಧುಗಿರಿಯ ಏಕಶಿಲಾ ಬೆಟ್ಟ, ಹುಬ್ಬಳ್ಳಿಯ ನೃಪತುಂಗ ಬೆಟ್ಟ, ಅಂಜನಾದ್ರಿ ಸೇರಿದಂತೆ ರಾಜ್ಯದ 6 ಐತಿಹಾಸಿಕ ಬೆಟ್ಟಗಳಿಗೆ ರೋಪ್ ವೇ ನಿರ್ಮಾಣ ಮಾಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಯಿತು. ಅತೀ ಶೀಘ್ರದಲ್ಲಿ ಪ್ರವಾಸೋದ್ಯಮ ಸಚಿವರಾದ ಸಿ.ಪಿ. ಯೋಗೇಶ್ವರ್ ಅಧಿಕಾರಿಗಳ ಜೊತೆ ಉತ್ತರಖಂಡ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರಗಳಿಗೆ ಭೇಟಿ ನೀಡಿ ಅಲ್ಲಿ ನಿರ್ಮಾಣ ಮಾಡಿರುವ ರೋಪ್ ವೇ ಯೋಜನೆಯನ್ನು ಖುದ್ದಾಗಿ ವೀಕ್ಷಿಸಲು ನಿರ್ಧರಿಸಲಾಗಿದೆ.
ಒಟ್ಟಾರೆ ರಾಜ್ಯದಲ್ಲಿರುವ ಎಲ್ಲಾ ಬಗೆಯ ಪ್ರವಾಸಿ ತಾಣಗಳನ್ನು ಗುರುತಿಸಿ ಪ್ರವಾಸಿಗರು ಭೇಟಿ ನೀಡಲು ಅನುಕೂಲವಾಗುಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸುವ ಬಗ್ಗೆ ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಲಾಯಿತು. ನಿಗಧಿತ ಸಮಯದಲ್ಲಿ ಪ್ರವಾಸೋದ್ಯಮ ಯೋಜನೆಗಳು ಪೂರ್ಣಗೊಳ್ಳಬೇಕು ಎಂದು ಸಚಿವ ಯೋಗೇಶ್ವರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.