ಬೆಂಗಳೂರು: ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ್ರೆ ಅಂತಹವರು ಮಾಸ್ ಕ್ವಾರಂಟೈನ್ ಶಿಕ್ಷೆ ಎದುರಿಸಬೇಕಾಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಲಾಕ್ ಡೌನ್ ಕುರಿತ ರಾಜ್ಯದಲ್ಲಿನ ಪರಿಸ್ಥಿತಿ ಕುರಿತು ಅಧಿಕಾರಿಗಳ ಜೊತೆ ಅವರು ಸಭೆ ನಡೆಸಿದರು. ಬೆಂಗಳೂರು ನಗರ ಹಾಗು ಜಿಲ್ಲಾ ಕೇಂದ್ರಗಳ ಸ್ಥಿತಿಗತಿ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಗೃಹ ಸಚಿವರು, ಲಾಕ್ ಡೌನ್ ಆದಾಗ ಜನರು ಸಹಕರಿಸಬೇಕು. ಜನರಿಗೋಸ್ಕರ ಈ ಲಾಕ್ ಡೌನ್ ಆದೇಶ ಮಾಡಲಾಗಿದೆ. ಜನರು ಸ್ವಯಂ ಪ್ರೇರಣೆಯಿಂದ ಮನೆಯಲ್ಲಿ ಇರಬೇಕು. ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು, ಇದು ನಾಗರಿಕರ ಕರ್ತವ್ಯ. ಹೊರಗಡೆ ಒಡಾಡುತ್ತಿರುವವರಿಗೆ ಪೊಲೀಸರು ತಿಳಿ ಹೇಳಿ ಕಳಿಸುವ ಕೆಲಸ ಮಾಡುತ್ತಿದ್ದಾರೆ ಎಂದ್ರು.
ಕ್ವಾರಂಟೈನ್ ನಲ್ಲಿರುವ ವ್ಯಕ್ತಿ ಮನೆಗೆ ನೋಟಿಸ್:
ಹೋಮ್ ಕ್ವಾರಂಟೈನ್ ನಲ್ಲಿ ಯಾರ್ ಇರುತ್ತಾರೋ ಅಂಥವರ ಮೇಲೆ ನಿಗಾ ಇಡಲಾಗಿದೆ. ಕ್ವಾರಂಟೈನ್ ನಲ್ಲಿರುವ ವ್ಯಕ್ತಿ ಮನೆಗೆ ನೋಟಿಸ್ ಅಂಟಿಸಲಾಗುತ್ತಿದೆ. ಒಂದು ವೇಳೆ ಹೋಮ್ ಕ್ವಾರಂಟೈನ್ ಉಲ್ಲಂಘನೆ ಮಾಡಿದ್ರೆ ಐಪಿಸಿ ಸೆಕ್ಷನ್ 271 ಪ್ರಕಾರ ಜೈಲಿಗೆ ಕಳಿಸಬೇಕಾಗುತ್ತೆ. ಈಗಾಗಲೇ ರಾಜ್ಯದಲ್ಲಿ ಒಟ್ಟು 7 ಜನರ ವಿರುದ್ಧ ಕೇಸ್ ದಾಖಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ರು.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ಬಂದ ನಂತರ ಆತನ ಜೊತೆ ಇದ್ದ ಮೂವರು ಸ್ನೇಹಿತರು ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ. ಅವರನ್ನು ಪತ್ತೆ ಹಚ್ಚಲು ಮಂಗಳೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇವೆ ಎಂದ್ರು.
ಪತ್ರಕರ್ತರಿಗೆ ತೊಂದರೆ ಕೊಡದಂತೆ ಸೂಚನೆ:
ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾವನ್ನು ಎಸೆನ್ಷಿಯಲ್ ಸರ್ವಿಸ್ ವ್ಯಾಪ್ತಿಗೆ ಸೇರಿಸಲಾಗಿದೆ. ಹಾಗಾಗಿ ಪೊಲೀಸರು ಕೂಡಾ ಪತ್ರಕರ್ತರಿಗೆ ತೊಂದರೆ ಕೊಡಬಾರದು ಅಂತ ಹೇಳಿರುವುದಾಗಿ ಗೃಹ ಸಚಿವರು ಸ್ಪಷ್ಟಪಡಿಸಿದರು.
ಅಗತ್ಯ ಸೇವೆ ಯಾವುದೂ ಬಂದ್ ಆಗಲ್ಲ:
ಅಗತ್ಯ ಸೇವೆಗಳಾದ ದಿನಸಿ ಅಂಗಡಿ, ಪೆಟ್ರೋಲ್ ಬಂಕ್ ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಗೆ ಯಾವುದೇ ನಿರ್ಬಂಧ ಇಲ್ಲ. ಖರೀದಿಗೆ ಸಮಯ ನಿಗದಿ ಮಾಡುವ ಚಿಂತನೆ ನಡೆದಿದೆ. ಈ ಸಮಯದಲ್ಲಿ ಸಾರ್ವಜನಿಕರು ಬಂದು ಖರೀದಿ ಮಾಡಬೇಕಾಗಬಹುದು, ಪರಿಸ್ಥಿತಿ ನಿಯಂತ್ರಣಕ್ಕೆ ಇದು ಅನಿವಾರ್ಯವಾಗಿದ್ದು ಸಹಕಾರ ನೀಡಿ ಎಂದು ಗೃಹ ಸಚಿವರು ಮನವಿ ಸಹ ಮಾಡಿದರು.