ಬೆಂಗಳೂರು: ದಾವಣಗೆರೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 35,452 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಈವರೆಗೂ 207 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಆದರೆ ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಒಂದೇ ಪರಿಹಾರವಲ್ಲ. ಆದರೂ ಸಂಜೆಯ ಸಭೆಯಲ್ಲಿ ಮುಖ್ಯಮಂತ್ರಿಗಳು ಏನು ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡೋಣ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ದಾವಣಗೆರೆ ಜಿಲ್ಲೆಯ ಉಸ್ತುವಾರಿ ಸಚಿವನಾದ ಮೇಲೆ ಹದಿನಾರು ಬಾರಿ ಜಿಲ್ಲೆಗೆ ಭೇಟಿ ಕೊಟ್ಟಿದ್ದೇನೆ. ಈಗ ಮಹದೇವಪುರ ವಲಯದ ಉಸ್ತುವಾರಿ ಕೂಡಾ ಕೊಟ್ಟಿದ್ದಾರೆ. ಹಾಗಾಗಿ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಹಾಗಾಗಿ ವಿಡಿಯೋ ಕಾನ್ಫರೆನ್ಸ್ ಮಾಡಿದ್ದೇನೆ ಎಂದರು.
ಮೂರು ಟೆಸ್ಟಿಂಗ್ ಲ್ಯಾಬ್ಗಳನ್ನು ದಾವಣಗೆರೆಯಲ್ಲಿ ಆರಂಭಿಸಲಾಗಿದೆ. ಇಲ್ಲಿ ಪ್ರತಿದಿನ 640 ಟೆಸ್ಟ್ ಮಾಡಲಾಗುತ್ತಿದೆ. ಪ್ರತಿ ವಾರ್ಡ್ ಮಟ್ಟದಲ್ಲಿ ಟಾಸ್ಕ್ಫೋರ್ಸ್ಗಳನ್ನು ರಚನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಎಸ್ಎಸ್ ಮತ್ತು ಜೆಎಂ ಎರಡೂ ಮೆಡಿಕಲ್ ಕಾಲೇಜುಗಳು ಸರ್ಕಾರದ ಸೂಚನೆಯಂತೆ ಬೆಡ್ಗಳನ್ನು ಒದಗಿಸಲು ಒಪ್ಪಿಕೊಂಡಿವೆ. ಈ ಪೈಕಿ 1493 ಬೆಡ್ಗಳು ನಮ್ಮ ಪಾಲಿಗೆ ಬರಲಿವೆ. ದಾವಣಗೆರೆಯಲ್ಲಿ 1600 ಪೊಲೀಸರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಎಲ್ಲರಿಗೂ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.
ಬಿತ್ತನೆ ಬೀಜ ಕೊರತೆ ಇಲ್ಲ:
ದಾವಣಗೆರೆ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದೆ. ಬಿತ್ತನೆಬೀಜ ಹಾಗೂ ರಸಗೊಬ್ಬರ ಕೊರತೆ ಇಲ್ಲ. ನರೇಗಾ ಯೋಜನೆ ಅಡಿ ಹನ್ನೆರಡು ಸಾವಿರ ಜನಕ್ಕೆ ಕೆಲಸ ನೀಡಲಾಗಿದೆ ಎಂದು ಹೇಳಿದರು.
ಲಾಕ್ಡೌನ್ ಪರಿಹಾರವಲ್ಲ:
ಲಾಕ್ಡೌನ್ ಒಂದೇ ಕೊರೊನಾಗೆ ಪರಿಹಾರವಲ್ಲ. ಈಗಾಗಲೇ ಲಾಕ್ಡೌನ್ ಮಾಡಿ ಒಂದು ವಾರ ಆಗಿದೆ. ಆದರೂ ಜನರು ಓಡಾಡುತ್ತಲೇ ಇದ್ದಾರೆ ಎಂದ ಸಚಿವರು, ಸಂಜೆ ಮುಖ್ಯಮಂತ್ರಿಗಳ ಸಭೆಯಲ್ಲಿ ಏನು ಚರ್ಚೆ ಆಗುತ್ತದೆಯೋ ನೋಡೋಣ ಎಂದರು.