ಬೆಂಗಳೂರು: ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ನಡೆಯುತ್ತಿದ್ದು, ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ನಗರದ ಶೇಷಾದ್ರಿಪುರಂ ಕಾಲೇಜಿಗೆ ಭೇಟಿ ನೀಡಿ, ಕೋವಿಡ್ ಮಾರ್ಗಸೂಚಿ ಕುರಿತು ಮಾಹಿತಿ ಪಡೆದುಕೊಂಡರು.
ಬಳಿಕ ಮಾತಾನಾಡಿದ ಸಚಿವರು, ರಾಜ್ಯಾದ್ಯಂತ ಸುಗಮವಾಗಿ ಸಿಇಟಿ ಪರೀಕ್ಷೆ ನಡೆಯುತ್ತಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಲಾಗಿದ್ದು, ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ಮಾರ್ಗಸೂಚಿ ಅನುಸರಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಪಾಸಿಟಿವ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಸೆಪ್ಟೆಂಬರ್ 20ರೊಳಗೆ ಸಿಇಟಿ ಫಲಿತಾಂಶ ಪ್ರಕಟಿಸಲಾಗುವುದು, ಅಕ್ಟೋಬರ್ ವೇಳೆಗೆ ಕೌನ್ಸಿಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದಿದ್ದಾರೆ.
ಇದೇ ವೇಳೆ ಮೈಸೂರು ಅತ್ಯಾಚಾರ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಇಂತಹ ಘಟನೆಗಳು ನಡೆಯಬಾರದು, ಇದನ್ನ ಖಂಡಿಸುತ್ತೇನೆ. ಕ್ರೂರ ಕೆಲಸ ಮಾಡಿರುವ ತಪ್ಪಿತಸ್ಥರ ವಿರುದ್ಧ ತ್ವರಿತವಾಗಿ ತಕ್ಕ ಶಿಕ್ಷೆ ಆಗಬೇಕು. ಇಂತಹ ಪ್ರದೇಶದಲ್ಲಿ ಮಾನಿಟರಿಂಗ್ ವ್ಯವಸ್ಥೆ ಹೆಚ್ಚು ಮಾಡಿ, ಡ್ರೋಣ್ ಬಳಕೆ ಮಾಡಬೇಕು ಎಂದಿದ್ದಾರೆ.
ಓದಿ: ಜಪ್ತಿಯಾಗಿದ್ದ ಬಾಲಿವುಡ್ ಬಿಗ್ ಬಿ ಕಾರು ಬಿಡುಗಡೆ ಮಾಡಿದ ಆರ್ಟಿಒ