ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಡಿಸೆಂಬರ್ ವೇಳೆಗೆ 15 ಸಾವಿರ ಮನೆಗಳಿಗೆ ಹೊಸದಾಗಿ ನಲ್ಲಿ ಸಂಪರ್ಕ ಕೊಡಲಾಗುವುದು. ಜತೆಗೆ ಶಿಥಿಲವಾಗಿರುವ ಒಂದೂವರೆ ಸಾವಿರ ಮ್ಯಾನ್ ಹೋಲ್ಗಳನ್ನು ಬದಲಿಸಲಾಗುವುದು ಎಂದು ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ ಭರವಸೆ ನೀಡಿದ್ದಾರೆ.
ತಮ್ಮ ಕ್ಷೇತ್ರ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಮಂಗಳವಾರ ನೀರಿನ ಕೊಳವೆ ಮಾರ್ಗ ಬದಲಾವಣೆ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿದರು. ಕ್ಷೇತ್ರದಲ್ಲಿ ಈ ಯೋಜನೆಯಡಿ 30 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಡಿ ಹೆಚ್.ಎಂ.ಟಿ ರಸ್ತೆ, ಸುಬೇದಾರ್ ಪಾಳ್ಯ, ಗಾಯತ್ರಿ ನಗರ ಮತ್ತು ಭುವನೇಶ್ವರಿ ನಗರಗಳ ವ್ಯಾಪ್ತಿಯಲ್ಲಿ ನೀರಿನ ಕೊಳವೆ ಬದಲಾವಣೆ, ಮ್ಯಾನ್ ಹೋಲ್ಗಳ ಬದಲಾವಣೆ, ಹಳೆಯ ಕೊಳಾಯಿ ಸಂಪರ್ಕದ ಜಾಗದಲ್ಲಿ ಹೊಸ ಸಂಪರ್ಕಗಳನ್ನು ಪೂರೈಸಲಾಗುವುದು ಎಂದು ಹೇಳಿದರು.
ಜನರಿಗೆ ಸಂಪೂರ್ಣ ಪರಿಶುದ್ಧವಾದ, ಕಲುಷಿತವಲ್ಲದ ಕುಡಿವ ನೀರನ್ನು ಪೂರೈಸುವ ಗುರಿಯಿಂದ ಈ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಜೊತೆಗೆ, ಈಗ ಶೇ. 25ರಷ್ಟು ನೀರು ಪೋಲಾಗುತ್ತಿದೆ. ಇದನ್ನು ಶೇ. 10ಕ್ಕೆ ಇಳಿಸಲಾಗುವುದು. ಇದಕ್ಕಾಗಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ವಿನ್ಯಾಸ ಮಾಡಲಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಶೇ. 60ರಷ್ಟು ಕೊಳವೆ ಮಾರ್ಗ ಬದಲಿಸಲಾಗಿದೆ ಎಂದು ನುಡಿದರು.
ಬಾಕಿ ಉಳಿದಿರುವ ಕೆಲಸಗಳಿಗೆ ಸಂಬಂಧಿಸಿದಂತೆ ಇನ್ನೊಂದು ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಇದಕ್ಕೆ ಕೂಡ ಸದ್ಯದಲ್ಲೇ ಅನುಮೋದನೆ ಸಿಗಲಿದೆ ಎಂದರು. ಕಾರ್ಯಕ್ರಮದಲ್ಲಿ ಪಕ್ಷದ ಮಲ್ಲೇಶ್ವರಂ ಘಟಕದ ಹಲವು ನಾಯಕರು ಉಪಸ್ಥಿತರಿದ್ದರು.
ಓದಿ: ಚುನಾವಣಾ ಪ್ರಚಾರದಲ್ಲಿ ಮೈಮರೆಯದೇ ರಸಗೊಬ್ಬರ ಕೊರತೆ ನೀಗಿಸಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ