ಬೆಂಗಳೂರು: ರಾಜ್ಯದಲ್ಲಿ ಕಳೆದ ತಿಂಗಳು 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿದ ಮಳೆಯಿಂದಾಗಿ ಭಾರೀ ಪ್ರಮಾಣದ ನಷ್ಟ ಉಂಟಾಗಿ, ಸುಮಾರು 8,071 ಕೋಟಿ ರೂ. ನಷ್ಟ ಉಂಟಾಗಿದೆ. ಹೀಗಾಗಿ ಕೇಂದ್ರದಿಂದ ಹೆಚ್ಚಿನ ಅನುದಾನದ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಹೊಂದಿದೆ.
ಬೆಳೆ ಮತ್ತು 2,500 ಕೋಟಿ ರೂ. ಮೌಲ್ಯದ ಮೂಲಭೂತ ಸೌಕರ್ಯ ಹಾನಿಗೊಳಗಾಗಿದೆ. ಒಟ್ಟು ಸುಮಾರು 8,071 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ ಕೇಂದ್ರದಿಂದ ಕೇವಲ 600 ರಿಂದ 800 ಕೋಟಿ ರೂ. ಮಾತ್ರ ಪರಿಹಾರ ಸಿಗುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ನಷ್ಟ ಅಂದಾಜು ಕಾರ್ಯವನ್ನು ಪೂರ್ಣಗೊಳಿಸಿರುವ ಕೇಂದ್ರದ ಸಮೀಕ್ಷಾ ತಂಡ ರಾಜ್ಯದ ಅಧಿಕಾರಿಗಳೊಂದಿಗೆ ಇತ್ತೀಚೆಗೆ ಮಹತ್ವದ ಸಭೆ ನಡೆಸಿತ್ತು. ಸಭೆಯಲ್ಲಿ ರಾಜ್ಯದಲ್ಲಿ ನೆರೆಯಿಂದ 8,071 ಕೋಟಿ ರೂ. ಅಂದಾಜು ಹಾನಿಯಾಗಿದ್ದು, ಎನ್ಡಿಆರ್ಎಫ್ ನಿಯಮಗಳ ಅನ್ವಯ ರೂ.628 ಕೋಟಿ ರೂ.ಅನುದಾನ ಮಾತ್ರ ಬರುತ್ತದೆ. ಇದು ಸಾಕಾಗುವುದಿಲ್ಲ. ಈ ಬಾರಿ ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಕೇಂದ್ರದ ನೆರೆ ಅಧ್ಯಯನ ತಂಡಕ್ಕೆ ಮನವಿ ಮಾಡಿದ್ದೇವೆಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದರು.
ಇದಲ್ಲದೆ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ನೆರೆ ಹಾನಿ ನಿಯಂತ್ರಿಸಲು ಪ್ರವಾಹ ಮುನ್ಸೂಚನೆ ಹಾಗೂ ಪ್ರತಿಕ್ರಿಯೆಗಾಗಿ ಸಮಗ್ರ ವ್ಯವಸ್ಥೆ ಮಾಡಬೇಕು. ಜೊತೆಗೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂ ಕುಸಿತ ಅಪಾಯದ ಮ್ಯಾಪಿಂಗ್ ಮತ್ತು ತ್ವರಿತ ಎಚ್ಚರಿಕೆ ನೀಡುವ ವ್ಯವಸ್ಥೆ ಸ್ಥಾಪಿಸಲು ರಾಷ್ಟ್ರೀಯ ವಿಪತ್ತು ನಿಯಂತ್ರಣ ಕಾರ್ಯಕ್ರಮದ ಅಡಿ ಯೋಜನೆ ರೂಪಿಸಬೇಕು ಎಂದು ರಾಜ್ಯ ಸರ್ಕಾರದ ಪರವಾಗಿ ಕೇಂದ್ರದ ತಂಡಕ್ಕೆ ಮನವಿ ಸಲ್ಲಿಸಿದ್ದಾರೆ.
ಆಗಸ್ಟ್ನಲ್ಲಿ ರಾಜ್ಯದಲ್ಲಿ ತೀವ್ರ ಮಳೆ ಉಂಟಾಗಿದ್ದು, ಅತಿವೃಷ್ಟಿಯಿಂದ ರಾಜ್ಯದ 23 ಜಿಲ್ಲೆಗಳ 130 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳಾಗಿ ಘೋಷಿಸಲಾಗಿದೆ. ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ಅವರ ನೇತೃತ್ವದಲ್ಲಿ 3 ತಂಡ ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ ಸೇರಿ ವಿವಿಧ ಕಡೆ ಭೇಟಿ ನೀಡಿ ಪ್ರವಾಹದಿಂದ ಉಂಟಾಗಿರುವ ಹಾನಿ ಬಗ್ಗೆ ಅಧ್ಯಯನ ನಡೆಸಿ ವಾಪಸಾಗಿದೆ.
ಪರಿಹಾರಕ್ಕೆ ಮನವಿ : ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ನೆರೆ ಪರಿಹಾರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ದೆಹಲಿಗೆ ತೆರಳಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಪಟ್ಟವರ ಜೊತೆ ಚರ್ಚಿಸಲು ಉದ್ದೇಶಿಸಲಾಗಿದೆ. ಇನ್ನೂ ಅಂತಿಮವಾಗಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.