ಬೆಂಗಳೂರು: ಭೂಸ್ವಾಧೀನಗೊಂಡ ಕೋನದಾಸಪುರ ಗ್ರಾಮದ ಜಮೀನುಗಳ ಭೂಮಿಯನ್ನು ಎಚ್.ಕೆ.ಇ ರಸ್ತೆಯಿಂದ ಬೂದಿಗೆರೆ ಕ್ರಾಸ್ವರೆಗೆ 4 ಪಥದ ರಸ್ತೆ ನಿರ್ಮಿಸಲು ಕಾಯ್ದಿರಿಸುವಂತೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸೂಚಿಸಿದ್ದಾರೆ. ವಿಧಾನಸೌಧದಲ್ಲಿ ಈ ಸಂಬಂಧ ಇಂದು ನಡೆದ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರು ಹಾಗೂ ಉನ್ನತ ಅಧಿಕಾರಿಗಳ ಸಭೆಯಲ್ಲಿ ಸಚಿವ ಅರವಿಂದ ಲಿಂಬಾವಳಿ ಈ ಕುರಿತು ಸೂಚನೆ ನೀಡಿದ್ದಾರೆ.
ಕೋನದಾಸಪುರದಲ್ಲಿ ಭೂಸ್ವಾಧೀನ ಮಾಡಿಕೊಂಡ ಸ್ಥಳವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಸ್ಯಾಟಲೈಟ್ ಬಸ್ ನಿಲ್ದಾಣ , ಮೆಟ್ರೋ ನಿಲ್ದಾಣ ಹಾಗೂ ಇನ್ನಿತರ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿರಿಸಲು ತಿಳಿಸಿದರು.
ಬೆಳ್ಳಂದೂರು ಹಾಗೂ ವರ್ತೂರು ಕೆರೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಸಚಿವ ಅರವಿಂದ ಲಿಂಬಾವಳಿ, ಶೀಘ್ರವಾಗಿ ಅಲ್ಲಿನ ಹೂಳು ತೆಗೆಯಲು ತಿಳಿಸಿದರು. ದೊಡ್ಡಬನಹಳ್ಳಿ ಹಾಗೂ ಗುಂಜೂರು ವಸತಿ ಯೋಜನೆಗಳ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವ ಬಗ್ಗೆ ಕೂಡ ಸಭೆಯಲ್ಲಿ ಚರ್ಚಿಸಲಾಯಿತು.
ಚಿಕ್ಕ ಬನಹಳ್ಳಿ ಕೆರೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ವಸತಿ ಸೌಕರ್ಯ ಕಲ್ಪಿಸುವ ಬಗ್ಗೆ ಚರ್ಚಿಸಿ ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕೆಂದು ಸಚಿವರು ಸೂಚಿಸಿದರು. ಕೋನದಾಸಪುರ, ಗುಂಜೂರು , ದೊಡ್ಡಬನಹಳ್ಳಿಯಲ್ಲಿ ಮಂಗಳವಾರ ಪರಿವೀಕ್ಷಣೆ ನಡೆಸಿ ವರದಿ ನೀಡಲು ಆದೇಶಿಸಿದರು.
ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷರು ಮತ್ತು ಶಾಸಕ ಎಸ್ ಆರ್ ವಿಶ್ವನಾಥ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಡಿಎ ಆಯುಕ್ತ ರಾಕೇಶ್ ಗೌಡ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.