ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್ಡಿ ಕುಮಾರಸ್ವಾಮಿ ಅವರು ಅಲ್ಪಸಂಖ್ಯಾತರ ಮತಗಳಿಗಾಗಿ ಹಲ್ಲು ಗಿಂಜುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದರು.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಿಬ್ಬರ ಉದ್ದೇಶ ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗಿದೆ. ಅಲ್ಪಸಂಖ್ಯಾತರ ಮತ ಪಡೆಯಲು ಅವರಿಬ್ಬರೂ ಸ್ಪರ್ಧೆಗಿಳಿದಿದ್ದಾರೆ. ಆರ್ಎಸ್ಎಸ್ ವಿಶ್ವದಲ್ಲಿ ಅತಿ ದೊಡ್ಡ ಸ್ವಯಂ ಸೇವಾ ಸಂಘಟನೆ ಎಂಬುದು ಅವರಿಬ್ಬರಿಗೂ ಗೊತ್ತಿದೆ. ಇದೇ ಕಾರಣಕ್ಕಾಗಿ ಅವರಿಬ್ಬರೂ ಆರ್ಎಸ್ಎಸ್ ವಿಚಾರದಲ್ಲಿ ಆಕ್ಷೇಪಾರ್ಹ ಟೀಕೆ ಮಾಡುತ್ತಿದ್ದಾರೆ ಎಂದರು.
ಬಿನ್ನಿಮಿಲ್ ಪೊಲೀಸ್ ಕ್ವಾರ್ಟಸ್ ಬೀಳುವ ಹಂತದಲ್ಲಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅಲ್ಲಿಗೆ ಹೋಗಿ ಪರಿಶೀಲನೆ ಮಾಡುತ್ತೇನೆ. ಆ ಕಟ್ಟಡದ ಪರಿಸ್ಥಿತಿ ಗಮನಕ್ಕೆ ಬಂದಿದೆ. ಗೃಹ-2025 ಯೋಜನೆಯಡಿ ಹತ್ತು ಸಾವಿರ ಪೊಲೀಸ್ ಕ್ವಾರ್ಟಸ್ಗಳ ನಿರ್ಮಾಣ ಮಾಡ್ತಿದ್ದೇವೆ. ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಟೆಂಡರ್ ಸಹ ಮುಗಿದಿದೆ. ಹೊಸ ಕಟ್ಟಡಗಳು ಬಂದ ಬಳಿಕ ಪೊಲೀಸರ ಕ್ವಾರ್ಟಸ್ ಸಮಸ್ಯೆ ಬಗೆಹರಿಯಲಿದೆ ಎಂದರು.
ಕೆಲವೆಡೆ ಪೊಲೀಸ್ ವಸತಿ ಗೃಹಗಳು ಇದ್ದರೂ ಪೊಲೀಸರು ಅಲ್ಲಿ ವಾಸಿಸುತ್ತಿಲ್ಲ. ಎಚ್ಆರ್ಎ (ಬಾಡಿಗೆ ಭತ್ಯೆ) ಹೆಚ್ಚು ಪ್ರಮಾಣದಲ್ಲಿ ಸಿಗುತ್ತಿರುವುದೇ ಇದಕ್ಕೆ ಕಾರಣ. ಹಿಂದೆ ವರ್ಷಕ್ಕೆ ಐದಾರು ಪೊಲೀಸ್ ಸ್ಟೇಷನ್ ನಿರ್ಮಿಸಲಾಗುತ್ತಿತ್ತು. ಕಳೆದೆರಡು ವರ್ಷಗಳಲ್ಲಿ 100 ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ 200 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ನೈತಿಕ ಪೊಲೀಸ್ ಗಿರಿ ಬಗ್ಗೆ ಸಿಎಂ ಸಮಜಾಯಿಷಿ ಕೊಟ್ಟಿದ್ದಾರೆ. ಅದರ ಬಗ್ಗೆ ನಾನು ಏನೂ ಹೇಳೋದಿಲ್ಲ ಎಂದರು.
ಇದನ್ನೂ ಓದಿ: ಹಿಂದೂ ದೇವಾಲಯಗಳನ್ನ RSSನವರೇನು ಗುತ್ತಿಗೆ ತೆಗೆದುಕೊಂಡಿದ್ದಾರಾ.. ಮಾಜಿ ಸಿಎಂ ಹೆಚ್ಡಿಕೆ ಪ್ರಶ್ನೆ