ಬೆಂಗಳೂರು: ಗಣಿಗಾರಿಕೆ ಸಂದರ್ಭದಲ್ಲಿ ಯಾರಾದರು ಕಾರ್ಮಿಕರು ಮೃತಪಟ್ಟರೆ ಕೂಡಲೇ ಗಣಿ ಮಾಲೀಕನನ್ನು ಬಂಧಿಸಿ ಜೈಲಿಗೆ ಕಳಿಸುವುದು ಎಷ್ಟು ಸರಿ. ನಾನೂ ಸೇರಿದಂತೆ ಸಾಕಷ್ಟು ಮಂದಿ ಕಾರ್ಖಾನೆ ನಡೆಸುತ್ತಿದ್ದೇವೆ. ಅವಘಡ ನಡೆಯಬೇಕೆಂದು ಯಾರೂ ಬಯಸುವುದಿಲ್ಲ. ಅಜಾಗ್ರತೆಯಿಂದ ಏನೋ ಒಂದು ಘಟನೆ ನಡೆದರೆ ಮಾಲೀಕರನ್ನೇ ಬಂಧಿಸಿ ಜೈಲಿಗೆ ಕಳುಹಿಸಿದರೆ ದೇಶ-ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ನಡೆದ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಉದ್ಯಮಿಗಳಿಗೆ ಸುರಕ್ಷತಾ ಜಾಗೃತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಣಿಗಾರಿಕೆ ನಡೆಸುವವರನ್ನು ಬೇರೆ ಬೇರೆ ಇಲಾಖೆಯಿಂದ ಕಳ್ಳರ ರೀತಿ ನೋಡುವ ಪರಿಸ್ಥಿತಿ ಇದೆ. ಇದನ್ನು ಬದಲಾಯಿಸಿ ಗೌರವದಿಂದ ನೋಡಿಕೊಳ್ಳುವ ಹಾಗೆ ಮಾಡಬೇಕಿದೆ. ಶೀಘ್ರವಾಗಿ ಎನ್ಒಸಿ ಸಿಗುವ ಕೆಲಸ ನಡೆಯಬೇಕು ಎಂದು ಸಚಿವ ನಿರಾಣಿ ಹೇಳಿದರು. ಇಲಾಖೆಯಲ್ಲಿ ಸಾಕಷ್ಟು ಲಂಚ ತಾಂಡವವಾಡ್ತಿದೆ. ಇದಕ್ಕೆ ತಕ್ಷಣವೇ ಕಡಿವಾಣ ಹಾಕುವುದಾಗಿ ಮತ್ತು ಏಪ್ರಿಲ್ ತಿಂಗಳಲ್ಲಿ ಮೈನ್ಸ್ ಅದಾಲತ್ ಮಾಡುವ ಬಗ್ಗೆ ಭರವಸೆ ನೀಡಿದರು.
ಓದಿ : ಫೋಟೋ ಪೋಸ್ಟ್ ಮಾಡಿ ಕೈ-ಕಮಲ ನಡುವೆ ಟ್ವೀಟ್ ವಾರ್
ನಾನು ಸಚಿವನಾದ ಮೇಲೆ ಶಿವಮೊಗ್ಗ, ಚಿಕ್ಕಬಳ್ಳಾಪುರದಲ್ಲಿ ಗಣಿಗಾರಿಕೆ ವೇಳೆ ಅವಘಡ ನಡೆದಿದೆ. ಚಿಕ್ಕಬಳ್ಳಾಪುರದಲ್ಲಿ ಘಟನೆ ನಡೆದಾಗ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಚಿಕ್ಕಬಳ್ಳಾಪುರದ ಘಟನೆಗೆ ಗಣಿ ಮಾಲೀಕ ಕಾರಣನಲ್ಲ. ಜಿಲೆಟಿನ್ ಕಡ್ಡಿಯನ್ನು ಬೇರೆಡೆಗೆ ಸ್ಥಳಾಂತರ ಮಾಡುವಾಗ ಘಟನೆ ನಡೆದಿದೆ. ಗಣಿ ಬಂದ್ ಆಗುವುದರಿಂದ ಸರ್ಕಾರಕ್ಕೆ ಸಮಸ್ಯೆಯಾಗಲಿದೆ. ಕ್ರಷರ್ ಮಾಲೀಕರಿಗೆ ಸಾಲ ತೀರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಕ್ರಷರ್, ಗಣಿ ಮಾಲೀಕರಿಂದ ಸರ್ಕಾರಕ್ಕೆ 6 ಸಾವಿರ ಕೋಟಿ ರೂ. ದಂಡ ಬಾಕಿ ಬರಬೇಕಿದೆ. ಅವೈಜ್ಞಾನಿಕ ದಂಡದಿಂದ ಇಷ್ಟು ಬಾಕಿಯಾಗಿದೆ. ಹೀಗಾಗಿ ಗಣಿ ಮಾಲೀಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದರು.
ಸುಪ್ರೀಂ ಕೋರ್ಟ್ನಲ್ಲಿ 18 ಸಾವಿರ ಕೋಟಿ ರೂ. ಗಣಿಕಾರಿಕೆಯ ರಾಜಧನ (ರಾಯಲ್ಟಿ) ಇದ್ದು, ಇದು ಇಲಾಖೆಗೆ ಸೇರಬೇಕಾದದ್ದು. ರಾಜ್ಯದಲ್ಲಿ ಗಣಿಗಾರಿಕೆಯಿಂದ 75 ಸಾವಿರ ಜನಕ್ಕೆ ಉದ್ಯೋಗ ಕೊಡುತ್ತಿದ್ದೇವೆ. ಆದರೆ ಬೇರೆ ಬೇರೆ ಇಲಾಖೆಗಳಿಂದ ನೀರಾಕ್ಷೇಪಣಾ ಪತ್ರ ಸಿಗುವುದು ಕಷ್ಟ ಆಗ್ತಿದೆ. ಹೀಗಾಗಿ, 90 ದಿನದ ಒಳಗಾಗಿ ಸಿಂಗಲ್ ವಿಂಡೋ ಮುಖಾಂತರ ಅನುಮತಿ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕ್ವಾರಿ ಮತ್ತು ಕ್ರಷರ್ ಉದ್ದಿಮೆಗಳಿಗೆ ಕಂದಾಯ, ಅರಣ್ಯ, ಗೃಹ ಮತ್ತು ವಾಣಿಜ್ಯ ತೆರಿಗೆ ಇಲಾಖೆಯೂ ಸಂಬಂಧಪಟ್ಟಿದ್ದಾಗಿದ್ದು, ಕಾನೂನಿನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಪರಿಹಾರ ಕೊಡಿಸುವಂತೆ ವಿವಿಧ ಹದಿನೆಂಟು ಅಂಶಗಳ ಬೇಡಿಕೆಗಳನ್ನು ಸಚಿವರಿಗೆ ಗಣಿ, ಕ್ರಷರ್ ಮಾಲೀಕರು ನೀಡಿದ್ದಾರೆ.