ಬೆಂಗಳೂರು: ಸಣ್ಣ ಗಣಿಗಾರಿಕೆ ನಡೆಸುವವರು ಎದುರಿಸುತ್ತಿರುವ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳಲು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಡಿಜಿಟಲ್ ವೇದಿಕೆ ಸಿದ್ಧಪಡಿಸುತ್ತಿದೆ.
ರಾಜ್ಯದಲ್ಲಿ ಗಣಿಗಾರಿಕೆ ಉದ್ಯಮ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ರಾಜ್ಯದ ಬೊಕ್ಕಸ ತುಂಬಿಸುವಲ್ಲಿ ಗಣಿಗಾರಿಕೆ ಕ್ಷೇತ್ರದ ಕೊಡುಗೆ ದೊಡ್ಡದಿದೆ. ಇತ್ತ ಗಣಿಗಾರಿಕೆ ಪರವಾನಿಗೆ ಪಡೆಯುವ ಪ್ರಕ್ರಿಯೆಯೂ ಅಷ್ಟೇ ಸಂಕೀರ್ಣತೆಯಿಂದ ಕೂಡಿದ್ದು, ರಾಜ್ಯವನ್ನು ಗಣಿ ಉದ್ಯಮ ಸ್ನೇಹಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಣಿ ನೀತಿಯನ್ನು ರೂಪಿಸುತ್ತಿದೆ. ಗಣಿ ನೀತಿ ಮೂಲಕ ರಾಜ್ಯದಲ್ಲಿ ಗಣಿಗಾರಿಕೆ ವಹಿವಾಟು ಸುಗಮಗೊಳಿಸುವ ನಿಟ್ಟಿನಲ್ಲಿ ನೂತನ ಗಣಿ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಈಗಾಗಲೇ ಸಮಿತಿ ಗಣಿ ನೀತಿ ಸಂಬಂಧ ತನ್ನ ವರದಿ ನೀಡಿದ್ದು, ಅಂತಿಮ ಹಂತದಲ್ಲಿದೆ.
ಗಣಿ ಅದಾಲತ್ಗೆ ಡಿಜಿಟಲ್ ಟಚ್:
ಗಣಿಗಾರಿಕೆ ಕ್ಷೇತ್ರಕ್ಕೆ ಪೂರಕ ವಾತಾವರಣ ನೀಡುವ ಸಂಬಂಧ ಗಣಿ ನೀತಿಯ ಭಾಗವಾಗಿ ಗಣಿಗಾರಿಕೆ ಇಲಾಖೆ 'ಗಣಿ ಅದಾಲತ್' ಅನ್ನು ಪ್ರಾರಂಭಿಸಿದೆ. ಇದರ ಮೂಲಕ ಗಣಿ ಉದ್ಯಮಿಗಳ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಗಣಿಗಾರಿಕೆ ಇಲಾಖೆ ಗಣಿ ಅದಾಲತ್ ಅನ್ನು ಡಿಜಿಟಲೀಕರಣ ಮಾಡಲು ನಿರ್ಧರಿಸಿದೆ.
ಬಹುತೇಕ ಸಮಸ್ಯೆಗಳಿಗೆ ಅದಾಲತ್ನಲ್ಲಿ ಪರಿಹಾರ:
ಅದಾಲತ್ ಮೂಲಕ ಗಣಿ ಪರವಾನಗಿ ಹಾಗೂ ಮತ್ತಿತರ ಬಹುತೇಕ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಐದು ಕಂದಾಯ ವಿಭಾಗಗಳಾದ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ವಿಭಾಗಗಳಲ್ಲಿ ಅದಾಲತ್ ನಡೆಸಲಾಗುವುದು. ಇದರ ಮೂಲಕ ಶೇ. 75ರಷ್ಟು ಸಮಸ್ಯೆಗಳನ್ನು ಸ್ಥಳೀಯವಾಗಿ ಇತ್ಯರ್ಥಗೊಳಿಸುವ ನಿರೀಕ್ಷೆ ಇದೆ. ಗಣಿಗಾರಿಕೆಗೆ ಅನುಮತಿ ಪಡೆಯಲು ಬೆಂಗಳೂರಿನವರೆಗೂ ಬರುವ ಅವಶ್ಯಕತೆ ಇಲ್ಲ.
ಬಾಕಿ ಇರುವ ಅರ್ಜಿಗಳು ಪರಿಹಾರಕ್ಕೆ ಹೊಸ ಪೋರ್ಟ್ಲ್:
ಕಳೆದ 15 ವರ್ಷಗಳಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಂಬಂಧಪಟ್ಟಂತೆ ವಿವಿಧ ಉತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ 6 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. ಇವುಗಳನ್ನು ಇತ್ಯರ್ಥಗೊಳಿಸಲು ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೆ ತರಲು ಈಗಾಗಲೇ ನಿರ್ಧರಿಸಲಾಗಿದೆ. ಇದಕ್ಕಾಗಿ ಗಣಿ ಇಲಾಖೆ ಹೊಸ ಡಿಜಿಟಲ್ ಪೋರ್ಟಲ್ ಅನ್ನು ಸಿದ್ಧಪಡಿಸುತ್ತಿದೆ.
ಇದನ್ನೂ ಓದಿ: ಯಾರಾದ್ರೂ ಸರಿ ನಾನು ಬಿಡಲ್ಲ, ತಲೆಯನ್ನೇ ಕಟ್ ಮಾಡ್ತೀನಿ: ನಟ ದರ್ಶನ್
ಇ-ಮೈನಿಂಗ್ ಅದಾಲತ್ :
ಆನ್‌ಲೈನ್ ಅದಲಾತ್ ನಡೆಸಿ ಗಣಿ ಪರವಾನಿಗೆ, ವ್ಯಾಜ್ಯಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ನಿರ್ಧರಿಸಲಾಗಿದೆ. ಸರ್ಕಾರವೇ ಉದ್ದಿಮೆದಾರರ ಮನೆಗೆ ಬರುವ ಸಲುವಾಗಿ ಇಲಾಖೆ ಗಣಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಲು ಇ-ಮೈನಿಂಗ್ ಅದಾಲತ್ ನಡೆಸಲು ನಿರ್ಧರಿಸಿದೆ. ಈ ಸಂಬಂಧ ಡಿಜಿಟಲ್ ಪೋರ್ಟಲ್ ಅನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಗಣಿಗಾರಿಕೆ ಇಲಾಖೆ ನಿರ್ದೇಶಕ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ಡಿಜಿಟಲ್ ಪೋರ್ಟಲ್ ವಿಶೇಷತೆ :
ಆನ್‌ಲೈನ್ ಮೂಲಕ ಗಣಿ ಅದಾಲತ್ ನಡೆಸುವ ಮೂಲಕ ತ್ವರಿತವಾಗಿ ಪರವಾನಿಗೆ, ಇತರೆ ಸಮಸ್ಯೆ ಇತ್ಯರ್ಥ ಪಡಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ ಗಣಿ ಉದ್ಯಮಿಗಳು ಬೆಂಗಳೂರಿಗೆ ಬರುವ ಅಗತ್ಯ ಇಲ್ಲ. ಆನ್‌ಲೈನ್ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ಅಧಿಕಾರಿಗಳು ಆನ್‌ಲೈನ್ ಆದಾಲತ್ ಮೂಲಕ ಅಧಿಕಾರಿಗಳು ಅಹವಾಲು ಆಲಿಸಿ ಸಮಸ್ಯೆ ಪರಿಹರಿಸಲಿದ್ದಾರೆ. ಡಿಜಿಟಲ್ ವೇದಿಕೆ ಮೂಲಕ ಮೇಲಾಧಿಕಾರಿಗಳು, ಸಂಬಂಧಿತ ಗಣಿ ಅರ್ಜಿದಾರರು, ಭೂ ಮಾಲೀಕರು ಭಾಗವಹಿಸಲಿದ್ದು, ತಮ್ಮ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.