ಬೆಂಗಳೂರು: ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೆ.ಎಸ್. (45) ಹತ್ಯೆ ಪ್ರಕರಣ ಸಂಬಂಧ ಈ ಹಿಂದೆ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪುರ್ ಅವರು ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದರು.
ಆರೋಪಿ ಕಿರಣ್ ಕಳೆದ ಎಂಟು ವರ್ಷಗಳಿಂದ ಗಣಿ ಇಲಾಖೆ ಪ್ರಧಾನ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇರೆಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ನಾಲ್ಕು ವರ್ಷಗಳಿಂದ ಪ್ರತಿಮಾ ಅವರ ಕಾರು ಚಾಲಕನಾಗಿದ್ದ. ವಿವಿಧ ಕಾರಣಕ್ಕಾಗಿ ಎರಡು ತಿಂಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಗಿತ್ತು. ಕೊಲೆಗೂ ಮುನ್ನ ನ. 3 ರಂದು ಪ್ರತಿಮಾ ಭೇಟಿ ಮಾಡಲು ಕಿರಣ್ ಬಂದಿದ್ದ, ಆದರೆ ಪ್ರತಿಮಾ ಸಿಕ್ಕಿರಲಿಲ್ಲ. ನ.4 ರಂದು ರಾತ್ರಿ ಮತ್ತೆ ಬಂದು ಕೆಲಸಕ್ಕೆ ಮರಳಿ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದ. ಮನವಿಗೆ ಸ್ಪಂದಿಸದ ಹಿನ್ನೆಲೆ ಪ್ರತಿಮಾ ಕೊಲೆ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಭಾನುವಾರ ಪ್ರತಿಮಾ ಸಹೋದರ ಪ್ರತೀಶ್ ಎಂಬುವರು ಪೊಲೀಸರಿಗೆ ಕರೆ ಮಾಡಿ ನೀಡಿದ ಮಾಹಿತಿ ಪ್ರಕಾರ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಹತ್ಯೆ ಬೆಳಕಿಗೆ ಬಂದಿತ್ತು. ಆರೋಪಿ ಪತ್ತೆಗೆ ಮೂರು ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಪ್ರತಿಮಾ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ವಿಚಾರಣೆ ನಡೆಸಲಾಗಿತ್ತು. ಪ್ರತಿಮಾ ಸಂಪರ್ಕದಲ್ಲಿದ್ದವರನ್ನೂ ಸಹ ವಿಚಾರಣೆ ಮಾಡಲಾಗಿತ್ತು. ಈ ವೇಳೆ ಮಾಜಿ ಚಾಲಕ ಕಿರಣ್, ಪ್ರತಿಮಾರನ್ನು ಸಂಪರ್ಕಿಸಿರುವುದು ತಿಳಿದುಬಂದಿದ್ದು, ಬಳಿಕ ತನಿಖೆ ಕೈಗೊಂಡಾಗ ಆರೋಪಿ ಮಲೆಮಹದೇಶ್ವರ ಬೆಟ್ಟದ ಬಳಿ ಅವಿತುಕೊಂಡಿರುವುದು ಗೊತ್ತಾಗಿತ್ತು. ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ತಿಳಿಸಿದರು.
ಮನೆಗೆ ನುಗ್ಗಿ ಚಾಕು ಇರಿದು ಕೊಲೆ: ಮನೆಗೆ ನುಗ್ಗಿ ಚಾಕು ಇರಿದು ಹತ್ಯೆಗೈದಿರುವ ಘಟನೆ ಶನಿವಾರ ರಾತ್ರಿ 8:30ರ ಸುಮಾರಿಗೆ ದೊಡ್ಡಕಲ್ಲಸಂದ್ರದ ಗೋಕುಲ ಅಪಾರ್ಟ್ಮೆಂಟಿನಲ್ಲಿ ನಡೆದಿತ್ತು. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಡ್ಕಿ ಮೂಲದ ಪ್ರತಿಮಾ ಅವರಿಗೆ ಭೂ ವಿಜ್ಞಾನ ಇಲಾಖೆಯಲ್ಲಿ ನೌಕರಿ ದೊರೆತಿದ್ದರಿಂದ ಬೆಂಗಳೂರಲ್ಲಿ ವಾಸಿಸುತ್ತಿದ್ದರು. ಗಂಡ ಮತ್ತು ಮಗ ತೀರ್ಥಹಳ್ಳಿಯಲ್ಲೇ ವಾಸವಿದ್ದರು. ಶನಿವಾರ ರಾತ್ರಿ 8 ಗಂಟೆಗೆ ಕಚೇರಿಯಿಂದ ಕಾರಿನಲ್ಲಿ ಪ್ರತಿಮಾ ಮನೆಗೆ ಆಗಮಿಸಿದ್ದರು. ಕಾರು ಚಾಲಕ ಡ್ರಾಪ್ ಮಾಡಿ ಮನೆಗೆ ತೆರಳಿದ್ದರು. ನಂತರ ಮನೆಗೆ ನುಗ್ಗಿ ಚಾಕು ಇರಿದು ಕೊಲೆ ಮಾಡಲಾಗಿತ್ತು.
ಪ್ರತಿಮಾ ಸಹೋದರ ರಾತ್ರಿ ಕರೆ ಮಾಡಿದರೂ ಫೋನ್ ರಿಸೀವ್ ಮಾಡಿರಲಿಲ್ಲ. ಇದರಿಂದ ಅನುಮಾನಗೊಂಡು ಅಪಾರ್ಟ್ಮೆಂಟ್ನ ಕೆಳಗಿನ ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದರು. ಆಗ ಕೆಳಗಿನ ಮನೆಯವರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯಲ್ಲಿ ಏನೂ ಕಳ್ಳತನವಾಗಿಲ್ಲ. ಮನೆಗೆ ನುಗ್ಗಿ ಹತ್ಯೆಗೈದಿರುವುದರಿಂದ ಇದು ಪೂರ್ವನಿಯೋಜಿತ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆಯಿಂದ ಕೊಲೆಯ ಹಿಂದಿನ ನಿಜವಾದ ಕಾರಣ ತಿಳಿದುಬರಲಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಬರ್ಬರ ಹತ್ಯೆ!