ಆನೆಕಲ್: ಇದೇ ತಿಂಗಳ ಶುಕ್ರವಾರ 9ರಂದು ಅವಧಿ ಮುಗಿದ ಹಾಲಿನ ಪೊಟ್ಟಣಗಳು ಹಾಗೂ ಕೊರೊನಾ ನಿಗ್ರಹ ಪಿಪಿಇ ಕಿಟ್ಗಳನ್ನ ಅಪರಿಚತರು ರಸ್ತೆ ಪಕ್ಕದಲ್ಲಿ ಎಸೆದು ಹೋಗಿದ್ದು, ಇಲ್ಲಿನ ಜನತೆ ಆಕ್ರೋಶ ಹೊರ ಹಾಕಿದ್ದಾರೆ.
ಹೆಬ್ಬಗೋಡಿ-ಹುಸ್ಕೂರು ಹೆದ್ದಾರಿಯ ಆರ್ಟಿಒ ಕಚೇರಿ ಮುಂಭಾಗದ ಖಾಲಿ ಮೈದಾನದಲ್ಲಿ ನಂದಿನಿ, ಹೆರಿಟೇಜ್ ಸೇರಿದಂತೆ ಹಲವಾರು ಕಂಪನಿಗಳ ಸಾವಿರಾರು ಲೀಟರ್ ಹಾಲಿನ ಪ್ಯಾಕೆಟ್ಗಳನ್ನು ಎಸೆದು ಹೋಗಿರುವ ಪರಿಣಾಮ ಪ್ಯಾಕೆಟ್ಗಳಲ್ಲಿದ್ದ ಹಾಲಿನ ದುರ್ವಾಸನೆ ಹೆಚ್ಚಾಗಿದೆ. ಹಾಲಿನ ಪೊಟ್ಟಣಗಳ ಜೊತೆಗೆ ಮೂಟೆಯಲ್ಲಿ ಪಿಪಿಇ ಕಿಟ್ಗಳನ್ನು ಕಳೆದ ಎರಡು ದಿನಗಳ ಹಿಂದೆ ಎಸೆದು ಹೋಗಿರುವುದಾಗಿ ರಸ್ತೆಯಲ್ಲಿ ಓಡಾಡುತ್ತಿರುವ ಸಂಚಾರಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇದರಿಂದ ರಸ್ತೆಯಲ್ಲಿ ಓಡಾಡುವಂತಹ ಜನ ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಹಾಲಿನ ವಾಸನೆಗೆ ಬೀದಿ ನಾಯಿಗಳು ವಿಷಪೂರಿತಗೊಂಡಿರುವ ಹಾಲನ್ನು ಸೇವಿಸುತ್ತಿವೆ. ಹೀಗಾಗಿ ನಾಯಿಗಳ ಆರೋಗ್ಯವೂ ಕೆಡುವ ಲಕ್ಷಣಗಳಿವೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಅಲ್ಲದೆ ಪಿಪಿಇ ಕಿಟ್ಗಳನ್ನು ನಾಯಿಗಳು ರಸ್ತೆಗೆ ತಂದು ಹಾಕುತ್ತಿವೆ. ಇದರಿಂದ ಸುತ್ತಲಿನ ಜನರಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಇಲ್ಲಿಗೆ ಇಷ್ಟೊಂದು ಹಾಲಿನ ಪ್ಯಾಕೆಟ್ಗಳು ಹಾಗೂ ಪಿಪಿಇ ಕಿಟ್ ಎಲ್ಲಿಂದ ಬಂದವು ಎನ್ನುವುದೇ ಪ್ರಶ್ನೆಯಾಗಿದೆ. ಈ ಬಗ್ಗೆ ಅಲ್ಲಿನ ಸುತ್ತಮುತ್ತಲಿನ ಗ್ರಾಮಗಳ ಜನರು ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ.