ಬೆಂಗಳೂರು: ನಸುಕಿನಲ್ಲಿ ಎಟಿಎಂಗೆ ನುಗ್ಗಿದ ಕಳ್ಳನೋರ್ವ ಹಣ ದೋಚುವ ವೇಳೆ ಎಟಿಎಂ ಸೆನ್ಸಾರ್ ನೀಡಿದ ಆಲರ್ಟ್ನಿಂದ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಶಿವಣ್ಣ ಕಳ್ಳತನಕ್ಕೆ ಯತ್ನಿಸಿ ವಿಫಲನಾದ ಆರೋಪಿ. ಜುಲೈ 6ರಂದು ಮೈಕೊ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಂಕ್ ಲೇಔಟ್ನಲ್ಲಿ ಎಚ್ಡಿಎಫ್ಸಿ ಎಟಿಎಂ ಕೇಂದ್ರದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ. ಸಿಎಸ್ಸಿ ಸೆಕ್ಯೂರಿಟಿ ಏಜೆನ್ಸಿ ಅಧಿಕಾರಿಯಾಗಿದ್ದ ನಾರಾಯಣ್ ಸಮಯಪ್ರಜ್ಞೆಯಿಂದ ಆರೋಪಿಯನ್ನು ಬಂಧಿಸಲಾಗಿದೆ.
ರಾತ್ರಿ ವೇಳೆ ಎಂದಿನಂತೆ ಸೆಕ್ಯೂರಿಟಿ ಗಾರ್ಡ್ಗಳ ತಪಾಸಣೆ ನಡೆಸಲು ನಾರಾಯಣ್ ಡ್ಯೂಟಿಯಲ್ಲಿದ್ದರು. ಈ ವೇಳೆ ಎಟಿಎಂ ಕೇಂದ್ರದಿಂದ ಸೈರನ್ ಅಲರ್ಟ್ ಬಂದಿರುವುದು ಗಮನಕ್ಕೆ ಬಂದಿದೆ. ಅನುಮಾನ ಬಂದು ಕೂಡಲೇ ಎಟಿಎಂ ಬಳಿ ಹೋದಾಗ ಅನುಮಾನಾಸ್ಪದವಾಗಿ ಎಟಿಎಂನಲ್ಲಿ ಇರುವುದು ಗೊತ್ತಾಗಿದೆ. ನಂತರ ಎಟಿಎಂ ಹೊರಗಿನಿಂದ ಲಾಕ್ ಮಾಡಿಕೊಂಡು ಮೈಕೊ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ.
ಕಳ್ಳತನ ವಿಫಲವಾಗಿದ್ದು ಹೇಗೆ?
ಹಣ ದೋಚಲು ಹೊಂಚು ಹಾಕಿದ್ದ ಕಳ್ಳ, ಕಬ್ಬಿಣದ ರಾಡ್ ತೆಗೆದುಕೊಂಡು ಎಟಿಎಂ ಒಳ ನುಗ್ಗಿದ್ದಾನೆ. ಇಂಟರ್ನೆಟ್ ವೈಯರ್ ಕಟ್ ಮಾಡಿ ಹಣವಿರುವ ಲಾಕರ್ಗೆ ಹೊಡೆದು ಹಣ ಕದ್ದು ಪರಾರಿಯಾಗುವ ಹಂತದಲ್ಲಿದ್ದಾಗ ಎಟಿಎಂನಿಂದ ಕೇಳಿಬಂದ ಸೈರನ್ ಅರ್ಲಟ್ ಕಳ್ಳನ ಹೊಂಚನ್ನು ವಿಫಲಗೊಳಿಸಿದೆ.