ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ಬಿಎಂಆರ್ಸಿಎಲ್ ಮೆಟ್ರೋ ಸೇವೆಯನ್ನು ಮಧ್ಯರಾತ್ರಿ 2 ಗಂಟೆವರೆಗೆ ವಿಸ್ತರಣೆ ಮಾಡಿದೆ.
ಡಿಸೆಂಬರ್ 31ರ ರಾತ್ರಿ 11.30 ರಿಂದ ಮಧ್ಯರಾತ್ರಿ 2 ಗಂಟೆಯವರೆಗೂ ಪ್ರತಿ 15 ನಿಮಿಷಗಳಿಗೊಮ್ಮೆ ಮೆಜೆಸ್ಟಿಕ್ ನಿಂದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಟರ್ಮಿನಲ್ಗಳಿಗೆ ಮೆಟ್ರೋ ರೈಲು ಸಂಚಾರ ಮಾಡಲಿದೆ ಎಂದು ನಮ್ಮ ಮೆಟ್ರೋ ಸಂಸ್ಥೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ವರ್ಷಾಚರಣೆಯಲ್ಲಿ ತೊಡಗುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮೆಟ್ರೋ ಸೇವೆಯನ್ನ ಮಧ್ಯರಾತ್ರಿ ತನಕ ವಿಸ್ತರಣೆ ಮಾಡಲಾಗಿದೆ. ವಿಸ್ತರಿಸಲಾದ ರಾತ್ರಿ 11.30 ರಿಂದ 2 ಗಂಟೆಯ ತನಕದ ಅವಧಿಯಲ್ಲಿ ಟ್ರಿನಿಟಿ, ಎಂಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಎಂದಿನಂತೆ ನೀಡುವ ಟೋಕನ್ಗಳು ಇರುವುದಿಲ್ಲ. ಇದರ ಬದಲು 50 ರೂಪಾಯಿ ಬೆಲೆಯ ಪೇಪರ್ ಟಿಕೆಟ್ಗಳನ್ನು ವಿತರಣೆ ಮಾಡಲಾಗುತ್ತದೆ.
ಟ್ರಿನಿಟಿ, ಮಹಾತ್ಮ ಗಾಂಧಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಡಿ.31ರ ರಾತ್ರಿ 8 ಗಂಟೆಯಿಂದಲೇ ಪೇಪರ್ ಟಿಕೆಟ್ಗಳು ಲಭ್ಯವಿರುತ್ತವೆ. ಸ್ಮಾರ್ಟ್ ಕಾರ್ಡ್ ಮತ್ತು ಕ್ಯೂ ಆರ್ ಟಿಕೆಟಿಂಗ್ ಇರುವ ಪ್ರಯಾಣಿಕರು ವಿಸ್ತರಣೆ ಮಾಡಲಾದ ಅವಧಿಯಲ್ಲಿಯೂ ಇವುಗಳನ್ನು ಬಳಸಬಹುದಾಗಿದೆ. ಉಳಿದ ಮೆಟ್ರೋ ಸ್ಟೇಷನ್ಗಳಲ್ಲಿ ವಿಸ್ತರಣೆ ಮಾಡಲಾದ ಅವಧಿಯಲ್ಲಿಯೂ ಟೋಕನ್ಗಳು ದೊರೆಯಲಿವೆ.
ಇದನ್ನೂ ಓದಿ:ಹೊಸ ವರ್ಷದ ದಿನ ಎಲ್ಲೆಲ್ಲಿ ವಾಹನಗಳಿಗೆ ಎಂಟ್ರಿ ಇದೆ ಅಥವಾ ಇಲ್ಲ: ಇಲ್ಲಿದೆ ಕಂಪ್ಲೀಟ್ ಮಾಹಿತಿ!